ಬಂಟ್ವಾಳ, ಜೂ 15 (DaijiworldNews/HR): ಲಾರಿ ಮತ್ತು ಕಾರುಗಳ ನಡುವೆ ನಡೆದ ಅಪಘಾತ ಪ್ರಕರಣ ತಿರುವು ಪಡೆದುಕೊಂಡು ಬಳಿಕ ಕೊಲೆ ಯತ್ನ ಪ್ರಕರಣ ದಾಖಲಾಗುವ ಮೂಲಕ ಕೊನೆಯಾದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರ್ ಎಂಬಲ್ಲಿ ಇಂದು ನಡೆದಿದೆ.

ಪುತ್ತೂರಿನ ಕೆಮ್ಮಿಂಜೆ ನಿವಾಸಿ ನಿತಿನ್ ಪಕ್ಕಳ ಎಂಬವರ ಕಾರಿಗೆ ಹಿಂಬದಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿ ಹೊಡೆದುದಲ್ಲದೆ ಬಳಿಕ ಲಾರಿ ಚಾಲಕ ಸಾಹುಲ್ ಹಮೀದ್ ಎಂಬಾತ ನಿತಿನ್ ಪಕ್ಕಳ ಅವರಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಕೊಲೆಗೆ ಯತ್ನ ನಡೆಸಿದ್ದಾನೆ ಎಂದು ಅವರು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪುತ್ತೂರಿನಿಂದ ನಿತಿನ್ ಪಕ್ಕಳ ಅವರು ತಮ್ಮ ಕಾರಿನಲ್ಲಿ ಸ್ನೇಹಿತ ರಾದ ಪ್ರಶಾಂತ್ ಶೆಣೈ, ಶ್ರೀರಾಮ್ ಪಕ್ಕಳ ಅವರೊಂದಿಗೆ ಮೂಡಬಿದಿರೆಯ ಮಿಜಾರು ಕಡೆಗೆ ಕಾರ್ಯಕ್ರಮದ ನಿಮಿತ್ತ ಹೋಗುವ ವೇಳೆ ಮೆಲ್ಕಾರ್ ಎಂಬಲ್ಲಿ ವಾಹನ ದಟ್ಟಣೆಯಿದ್ದು ಈ ಕಾರಣಕ್ಕಾಗಿ ಕಾರನ್ನು ನಿಧಾನವಾಗಿ ಚಲಿಸಿಕೊಂಡು ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮತ್ತು ನಿರ್ಲಕ್ಷ್ಯತನದಿಂದ ಶಾಹುಲ್ ಹಮೀದ್ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಈ ಬಗ್ಗೆ ಪ್ರಶ್ನಿಸಿದಾಗ ಹಮೀದ್ ಲಾರಿ ನಿಲ್ಲಿಸದೆ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ. ಅಲ್ಲದೆ ಅವ್ಯಾಚ್ಚ ಶಬ್ದಗಳಿಂದ ಬೈಯಲು ಶುರುಮಾಡಿದ್ದಾನೆ. ಬಳಿಕ ಲಾರಿಯಲ್ಲಿದ್ದ ಸ್ಕೂಡ್ರಯರ್ ನಿಂದ ನಿತಿನ್ ಅವರ ಕುತ್ತಿಗೆಗೆ ತಿವಿಯಲು ಯತ್ನಿಸಿದ್ದಾನೆ . ನಿತಿನ್ ಸಮಯಪ್ರಜ್ಞೆಯಿಂದ ತಪ್ಪಿಸಿಕೊಂಡ ಪರಿಣಾಮವಾಗಿ ಕೋಲು ಕೈಗೆ ಗಾಯವಾಗಿ ಅಪಾಯವಿಲ್ಲದೆ ಪಾರಾಗಿದ್ದಾರೆ.
ಈತ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾನೆ ಎಂದು ನಿತಿನ್ ಪೋಲೀಸ್ ಠಾಣೆಗೆ ದೂರು ನೀಡಿದ್ದಾನೆ.
ನಿತಿನ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಸಾಹುಲ್ ಹಮೀದ್ ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ.
ಸಾಹುಲ್ ಹಮೀದ್ ಕೂಡ ಇವರ ವಿರುದ್ದ ದೂರು ನೀಡಿದ್ದು ದೂರಿಗೆ ಪ್ರತಿದೂರು ದಾಖಲಾಗಿದೆ.