ಮಂಗಳೂರು, ಜೂ 15 (DaijiworldNews/MS): 2023-24ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ- ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಮಂಗಳೂರಿನ ಪ್ರತಿಷ್ಠಿತ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯೋರ್ವನಿಗೆ ರ್ಯಾಂಕ್ ಗಳ ಸುರಿಮಳೆಯೇ ಸಿಕ್ಕಿದೆ.

ಮೂಲತಃ ಕೋಲಾರ ಜಿಲ್ಲೆಯ ಹರೀಶ್ ಎಸ್.ಬಿ. ಹಾಗೂ ರಾಧಮ್ಮ ಕೆ. ದಂಪತಿ ಪುತ್ರರಾದ ಭೈರೇಶ್ ಎಸ್.ಎಚ್. ಮಂಗಳೂರು ಎಕ್ಸ್ಪರ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಇಂದು ಪ್ರಕಟವಾದ ಸಿಇಟಿ ಫಲಿತಾಂಶದಲ್ಲಿ ಬಿಎಸ್ಸಿ ಕೃಷಿ ವಿಭಾಗದಲ್ಲಿ ಪ್ರಥಮ ರ್ಯಾಂಕ್ (96.7%)) ಪಡೆದಿದ್ದಾರೆ.
ಇಷ್ಟು ಮಾತ್ರವಲ್ಲದೇ ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ದ್ವಿತೀಯ ಸ್ಥಾನ (98.1%)ಪಡೆದಿದ್ದಾರೆ.
ಡಿ.ಫಾರ್ಮಾ, ಎಂ.ಫಾರ್ಮಾ, ನರ್ಸಿಂಗ್, ವೆಟರ್ನರಿ ಇವೆಲ್ಲಾ ವಿಭಾಗದಲ್ಲೂ ನಾಲ್ಕನೇ ರ್ಯಾಂಕ್ ಪಡೆದಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ನಲ್ಲಿ 16 ನೇ ಸ್ಥಾನ ಗಳಿಸಿದ್ದಾನೆ.
ಇದು ಸಿಇಟಿ ಫಲಿತಾಂಶವಾದರೆ, ಇನ್ನು ಮಂಗಳವಾರ ಪ್ರಕಟವಾದ ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷಾ ಫಲಿತಾಂಶದಲ್ಲಿ 720 ಅಂಕಗಳಲ್ಲಿ 710 ಅಂಕ ಗಳಿಸುವ ಮೂಲಕ ದೇಶದಲ್ಲೇ ಭೈರೇಶ್ 48ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಇವರು ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ.
ಭೈರೇಶ್ ಗೆ ಮುಂದೆ ಕಾರ್ಡಿಯಾಲಜಿಯಲ್ಲಿ ವಿಶೇಷ ತರಬೇತಿ ಪಡೆದು, ಹೃದಯರೋಗಗಳ ತಜ್ಞನಾಗುವ ಹಂಬಲವಿದೆ.