ಪುತ್ತೂರು, ಜೂ 15 (DaijiworldNews/HR): ಹನ್ನೊಂದು ತಿಂಗಳ ಕಂದಮ್ಮನನ್ನು ಹುಬ್ಬಳ್ಳಿಯಲ್ಲಿ ಬಿಟ್ಟು ಮಹಿಳೆಯೋರ್ವಳು ಪುತ್ತೂರಿನ ಕೋಡಿಂಬಾಡಿಯಲ್ಲಿ ತೋಟದ ಕೆಲಸ ನಿರ್ವಹಿಸುತ್ತಿದ್ದ ಪ್ರಿಯಕರನ ಬಳಿ ಬಂದು ಇಬ್ಬರೂ ಅಲ್ಲಿಂದ ಬೇರೆಡೆಗೆ ಪರಾರಿಯಾದ ಘಟನೆ ನಡೆದಿದೆ.

ಮಹಿಳೆಯ ಪ್ರೇಮದ ವಿಷಯ ಅರಿತಿದ್ದ ಮನೆಯವರು ಆಕೆ ನಾಪತ್ತೆಯಾದ ತಕ್ಷಣವೇ ಕೋಡಿಂಬಾಡಿಗೆ ಬಂದು ಹುಡುಕಾಟ ನಡೆಸಿದ್ದರು. ಈ ಮಧ್ಯೆ ಮರುದಿನ ಇಬ್ಬರೂ ಸಿದ್ದಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ವಿವಾಹಿತೆಯನ್ನು ಹುಬ್ಬಳ್ಳಿಗೆ ವಾಪಸು ಕರೆದೊಯ್ದ ಮಾಹಿತಿ ಲಭ್ಯವಾಗಿದೆ.
ಹುಬ್ಬಳ್ಳಿಯ 25 ವರ್ಷದ ವಿವಾಹಿತೆ ಅದೇ ಊರಿನ ಯುವಕನನ್ನು ಪ್ರೀತಿಸುತ್ತಿದ್ದಳು. ಆತ ಕೋಡಿಂಬಾಡಿ ಭಾಗದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿರುವ ವಿಚಾರ ಯುವತಿ, ಆಕೆಯ ಮನೆಯವರಿಗೆ ಮೊದಲೇ ತಿಳಿದಿತ್ತು. ತವರು ಮನೆಯಲ್ಲಿದ್ದ ಆಕೆ ಮೂರು ದಿನಗಳ ಹಿಂದೆ ಮನೆ ಮಂದಿಯ ಕಣ್ತಪ್ಪಿಸಿ ತನ್ನ ಮಗುವನ್ನು ತೊರೆದು, ಫೋನ್ ಕರೆಯನ್ನು ಸ್ವೀಕರಿಸದೆ ನಾಪತ್ತೆಯಾಗಿದ್ದಳು.
ಇನ್ನು ಆಕೆ ನೇರವಾಗಿ ಪ್ರಿಯಕರನ ಬಳಿಗೆ ಬಂದಿರಬಹುದು ಎಂಬ ಶಂಕೆಯಿಂದ ಆಕೆಯ ಮನೆಯವರು ಜೂ. 13ರಂದು ರಾತ್ರಿ ಸುಮಾರು 11 ಗಂಟೆಯ ವೇಳೆ ಪುತ್ತೂರಿನ ಕೋಡಿಂಬಾಡಿಗೆ ಬಂದು ಹುಡುಕಾಟ ನಡೆಸಿದ್ದಾರೆ.
ಕೋಡಿಂಬಾಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಪ್ರಿಯಕರನು ಯುವತಿಯೊಂದಿಗೆ ಅಲ್ಲಿಂದ ಪರಾರಿಯಾಗಿದ್ದು, ಹುಡುಕಾಟ ಮುಂದುವರಿಸಿದ ಪೊಲೀಸರು ಟವರ್ ಲೊಕೇಶನ್ ಮೂಲಕ ಅವರಿಬ್ಬರೂ ಸಿದ್ದಕಟ್ಟೆಯಲ್ಲಿರುವುದನ್ನು ಪತ್ತೆ ಹಚ್ಚಿದರು.
ತನ್ನ ಕೈಯಲ್ಲಿ ಹಣ ಇಲ್ಲದಿದ್ದರೂ ಮಹಿಳೆಗೆ ಸರಕಾರಿ ಬಸ್ನಲ್ಲಿ ಉಚಿತ ಪ್ರಯಾಣ ವರವಾಗಿ ಪರಿಣಮಿಸಿತ್ತು.