ಕಾಸರಗೋಡು, ಜೂ 14 (DaijiworldNews/HR): ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ನಗದು ಹಾಗೂ ಕಾರನ್ನು ಕಳವುಗೈದ ಘಟನೆ ಬುಧವಾರ ಮುಂಜಾನೆ ಕುಂಬಳೆ ಕೊಡ್ಯಮ್ಮೆ ಚೂರಿತ್ತಡ್ಕದ ಗಲ್ಫ್ ಉದ್ಯೋಗಿ ಅಬೂಬಕ್ಕರ್ ಅವರ ಮನೆಯಲ್ಲಿ ನಡೆದಿದೆ.

ಮುಂಜಾನೆ ಮೂರು ಗಂಟೆ ಸುಮಾರಿಗೆ ಕಪಾಟನ್ನು ತೆರೆಯುವ ಶಬ್ದ ಕೇಳಿ ಮನೆಯವರು ಎಚ್ಚೆತ್ತು ಬೊಬ್ಬೆ ಹಾಕಿದಾಗ ಕಳ್ಳರು ಕಳವು ಗೈದ ಸೊತ್ತು ಸಹಿತ ಪರಾರಿಯಾಗಿದ್ದಾರೆ. ಮನೆಯ ಬಾಗಿಲು ಹಾಗೂ ಕಿಟಿಕಿಗೆ ಯಾವುದೇ ಹಾನಿಯಾಗಿಲ್ಲ, ಇದರಿಂದ ಕಳ್ಳರು ಹಗಲು ಸಮಯದಲ್ಲಿ ನುಗ್ಗಿ ಅಡಗಿ ಕುಳಿತುಕೊಂಡು ರಾತ್ರಿ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮನೆಯಲ್ಲಿ ಅಬೂಬಕ್ಕರ್ ರವರ ಪತ್ನಿ ಮತ್ತು ಮಕ್ಕಳಿದ್ದರು.
ಕೆಲ ಅಂತಸ್ತಿನಲ್ಲಿದ್ದ ಮೂರು ಹಾಗೂ ಮೇಲಂತಸ್ತಿನಲ್ಲಿದ್ದ ಎರಡು ಕಪಾಟುಗಳನ್ನು ಕೇಳಿ ಕೈ ಬಳಸಿ ತೆರೆದಿದ್ದು, ಹತ್ತು ಪವನ್ ಚಿನ್ನಾಭರಣ, 25 ಸಾವಿರ ರೂ. ನಗದು ಹಾಗೂ ಮನೆಯಂಗಳದಲ್ಲಿರಿಸಲಾಗಿದ್ದ ಸ್ವಿಫ್ಟ್ ಕಾರನ್ನು ಕಳವು ಮಾಡಲಾಗಿದೆ.
ಈ ಬಗ್ಗೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.