ಉತ್ತರ ಪ್ರದೇಶ, ಅ 03 (MSP): ತಮ್ಮ ಸಮುದಾಯದಿಂದ ನಿರ್ಲಕ್ಷಿಸಲ್ಪಟ್ಟ ಮತ್ತು ಪೊಲೀಸರ ಬೇಜಾವಬ್ದಾರಿತನದಿಂದ ಬೇಸತ್ತ 13 ಜನ ಸದಸ್ಯರನ್ನೊಳಗೊಂಡ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಘಟನೆ ಅ.02 ರ ಮಂಗಳವಾರ ಬಾಗ್ಪತ್ ಜಿಲ್ಲೆಯ ಭದ್ರಾರ್ಕಾ ಎನ್ನುವ ಗ್ರಾಮದಲ್ಲಿ ನಡೆದಿದೆ.
ಅಕ್ತರ ಅಲಿ (೬೮) ಅವರು ಈ ಕುಟುಂಬದ ಹಿರಿಯ ಸದಸ್ಯರಾಗಿದ್ದು, ಜುಲೈ 28ರಂದು ಅಕ್ತರ್ ಅಲಿ ಅವರ 28 ವರ್ಷದ ಪುತ್ರನ ಹತ್ಯೆಯಾಗಿತ್ತು. ಅಕ್ತರ್ ಅವರ ಪುತ್ರನಾದ ಗುಲ್ಹಸನ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಮರಕ್ಕೆ ತೂಗು ಹಾಕಿ ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೇ ಈ ಅಸ್ವಾಭಾವಿಕ ಸಾವನ್ನು ಆತ್ಮಹತ್ಯೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಈ ಕುಟೂಂಬ ನ್ಯಾಯದ ಹೋರಾಟಕ್ಕೆ ಮುಂದಾದಾಗ ತಮ್ಮದೇ ಸಮುದಾಯವರ ಸಹಕಾರ ದೊರೆಯದಿದ್ದರಿಂದ ಮತ್ತು ಪೊಲೀಸರ ನಿರ್ಲಕ್ಷ್ಯದಿಂದ ತೀವ್ರವಾಗಿ ನೊಂದು ಕೊನೆಗೆ ಮತಾಂತರದ ನಿರ್ಧಾರವನ್ನು ಪ್ರಕಟಿಸಿದ್ದರು.
ಮುಸ್ಲಿಂ ಕುಟುಂಬವೂ ಹವನದಲ್ಲಿ ಭಾಗಿಯಾಗಿ, ಹನುಮಾನ್ ಚಾಲೀಸಾವನ್ನು ಪಠಿಸಿ ಹಣೆಗೆ ಕೇಸರಿ ಪಟ್ಟಿ ಧರಿಸಿ ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗುತ್ತಾ ಹಿಂದು ಧರ್ಮ ಸ್ವೀಕರಿಸಿದ್ದಾರೆ. ಇವರನ್ನು ಹಿಂದೂ ಪರ ಸಂಘಟನೆಯ ಸದಸ್ಯರು ಹಣೆಗೆ ತಿಲಕವಿಟ್ಟು ಹಿಂದೂ ಧರ್ಮಕ್ಕೆ ಸ್ವಾಗತಿಸಿದ್ದಾರೆ. ಅಕ್ತರ ಅಲಿ ಇದೀಗ ಧರಂ ಸಿಂಗ್ ಆಗಿ ಬದಲಾಗಿದ್ದು, ಅವರ ಕುಟುಂಬದಲ್ಲಿ ಒಟ್ಟು 20 ಜನ ಸದಸ್ಯರಿದ್ದಾರೆ, ಇವರಲ್ಲಿ 13 ಜನ ಹಿಂದೂಗಳಾಗಿದ್ದಾರೆ. ಅಲಿ ಅವರ ಮೂವರು ಗಂಡು ಮಕ್ಕಳು ಸಹ ಹಿಂದೂಗಳಾಗಿದ್ದು, ದಿಲ್ಸಾದ್ ಈಗ ದಿಲರ್, ನೌಶಾದ್ ಇದ್ದವ ನರೇಂದ್ರ ಮತ್ತು ಇರ್ಷಾದ್ ಎಂಬುವವ ಕವಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅಕ್ತರ್ ಅವರ ಮೂವರು ಸೊಸೆಯರು, 6 ಜನ ಮೊಮ್ಮಕ್ಕಳು ಸಹ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ ತಮ್ಮ ಧರ್ಮವನ್ನು ಬದಲಾವಣೆ ಮಾಡಿ ಎಂದು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ಗೆ ಅಫಿದವಿತ್ ಸಲ್ಲಿಸಿದ್ದಾರೆ.
ಮತಾಂತರ ಬಳಿಕ ಅಕ್ತರ ಅಲಿ ಯಾನೆ ಧರಂ ಸಿಂಗ್ ಅವರು ಮಾದ್ಯಮದೊಂದಿಗೆ ಮಾತನಾಡಿ, ನನ್ನ ಮಗನಾದ ಗುಲ್ಹಸನ್ನ ಹತ್ಯೆಯಾಗಿದ್ದು, ಇದನ್ನು ಪೊಲೀಸರು ಆತ್ಮಹತ್ಯೆ ಎಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. ನಮ್ಮ ಧರ್ಮವನ್ನು ಬದಲಾಯಿಸುವುದರಿಂದ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬಹುದು ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ. ಪುತ್ರ ಹತ್ಯೆಯಾದಾಗ ಪೊಲೀಸರಾಗಲಿ ಅಥವಾ ನಮ್ಮ ಧರ್ಮದ ಸದಸ್ಯರಾಗಲಿ, ಎಷ್ಟು ಗೋಗರೆದರೂ ಯಾರು ಕೂಡ ಸಹಾಯಕ್ಕೆ ಬರಲಿಲ್ಲ. ನಮಗೆ ಸಹಾಯ ಮಾಡುವ ಬದಲು ಮುಸ್ಲಿಂ ಪಂಚಾಯತ್ ಕೂಡಾ ನಮ್ಮನ್ನು ಅವಮಾನ ಮಾಡಿತು. ಧರ್ಮ ಪರಿವರ್ತನೆಯಿಂದಾದರೂ ನ್ಯಾಯ ಪಡೆದುಕೊಳ್ಳುತ್ತೇವೆ ಎಂಬ ನಂಬಿಕೆ ಇದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಆದರೆ ಹಿಂದೂ ಕಾರ್ಯಕರ್ತರ ಪ್ರಕಾರ, ಇದು ಮತಾಂತರವಾಗಿರದೆ ಘರ್ ವಾಪಸಿ ಪ್ರಕರಣವಾಗಿದೆ.ಇವರ ಹಿಂದಿನ ತಲೆಮಾರಿನವರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದು, ಇದೀಗ ಮತ್ತೆ ಹಿಂದುಗಳಾಗಿ ಮರುಸೇರ್ಪಡೆಯಾಗಿದ್ದಾರೆ ಎಂದಿದ್ದಾರೆ.