ಬೆಳ್ತಂಗಡಿ, ಜ 8 (Daijiworld News/MB) : ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಯುವತಿಯರಿಬ್ಬರು ತಮಗೆ ಮೋಸ ಮಾಡಿದ ಯುವಕನೊಬ್ಬನನ್ನು ಹುಡುಕಿಕೊಂಡು ಕಕ್ಕಿಂಜೆಗೆ ಬಂದ ಘಟನೆ ಸೋಮವಾರ ನಡೆದಿದೆ.




ಕಕ್ಕಿಂಜೆಯ ಮುಸ್ಲಿಂ ಸಮುದಾಯದ ಯುವಕ ಹಾಗು ಸೊರಬದ ಹಿಂದೂ ಯುವತಿ ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರೀರ್ವರ ಮಧ್ಯೆ ಗೆಳೆತನವಿತ್ತು. ಇದನ್ನು ದುರುಪಯೋಗಿಸಿಕೊಂಡ ಯುವಕ ಆಕೆಯ ಒಂದಿಷ್ಟು ಹಣ, ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದ. ಆತನನ್ನು ಹುಡುಕಿಕೊಂಡು ಯುವತಿ ತನ್ನ ರಾಯಚೂರಿನ ಮುಸ್ಲಿಂ ಗೆಳತಿಯೊಂದಿಗೆ ಹಾಗು ಇನ್ನಿಬ್ಬರು ಮುಸ್ಲಿಂ ಯುವಕರೊಂದಿಗೆ ಕಾರಿನಲ್ಲಿ ಕಕ್ಕಿಂಜೆಗೆ ಬಂದಿದ್ದರು. ಆದರೆ ಹಣ ತೆಗೆದುಕೊಂಡ ಓಡಿ ಬಂದಾತ ಕಾಸರಗೋಡಿಗೆ ಪರಾರಿಯಾಗಿದ್ದ.
ಈ ಮಧ್ಯೆ ಕಾರನ್ನು ಮಸೀದಿಯೊಂದರ ಪಕ್ಕ ನಿಲ್ಲಿಸಿ ಯುವಕರಿಬ್ಬರು ಮಸೀದಿಗೆ ಸ್ವಚ್ಛತೆಗಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಕಾರಿನಲ್ಲಿದ್ದ ಯುವತಿಯರಲ್ಲಿ ಏನು ಎತ್ತ ಎಂದು ಪ್ರಶ್ನಿಸಿದಾಗ ಯುವತಿಯೊಬ್ಬಳು ಉಡಾಫೆ ಮಾತನಾಡಿದ್ದಾಳೆ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಸ್ಥಳೀಯರು ಪೋಲಿಸರಿಗೆ ಸುದ್ದಿ ಮುಟ್ಟಿಸಿದ್ದು ಇದೇ ವೇಳೆ ಈ ವಿಚಾರ ಹಿಂದೂ ಸಂಘಟನೆಯವರಿಗೆ ಗೊತ್ತಾಗಿ ಯುವಕರನ್ನು ಯೋಗ್ಯವಾಗಿ ವಿಚಾರಿಸಿಕೊಂಡಿದ್ದಾರೆ.
ಬಳಿಕ ಪೋಲಿಸರು ನಾಲ್ವರನ್ನು ಠಾಣೆಗೆ ಕರೆಯಿಸಿ ಬುದ್ಧಿವಾದ ಹೇಳಿದ್ದಾರೆ. ಮಂಗಳವಾರ ಬೆಳಿಗ್ಗೆ ಹೆತ್ತವರು ಯುವತಿಯರನ್ನು ಕರೆದುಕೊಂಡು ಹೋಗಿದ್ದಾರೆ.