ಮಂಗಳೂರು, ನ.18 (DaijiworldNews/AA): ಹೊಟೇಲ್ಗಳು ಹಾಗೂ ಆಹಾರ ತಯಾರಿಕಾ ಘಟಕಗಳಲ್ಲಿ ಒಂದೇ ಎಣ್ಣೆಯನ್ನು ಪದೇ ಪದೇ ಮರುಬಳಕೆ ಮಾಡುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ, ಬಳಸಿದ ಎಣ್ಣೆಯನ್ನು ಸಂಗ್ರಹಿಸಲು ಪ್ರತ್ಯೇಕ ಮೊಬೈಲ್ ಆ್ಯಪ್ ರೂಪಿಸಿ ಅಧಿಕೃತವಾಗಿ ಖರೀದಿ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರಂಭಿಕ ಹಂತದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಮಂಗಳೂರು, ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ನಗರಗಳಲ್ಲಿ ಜಾರಿಗೆ ತಂದು ಬಳಸಿದ ಎಣ್ಣೆ ಖರೀದಿ ಪ್ರಕ್ರಿಯೆ ನಡೆಸಲಾಗುವುದು" ಎಂದು ಹೇಳಿದ್ದಾರೆ.
"ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ರಾಜ್ಯಾದ್ಯಂತ ವಿವಿಧ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳ ಮೇಲೆ ದಾಳಿಗಳು ನಿರಂತರವಾಗಿ ನಡೆಯುತ್ತಿದೆ. ಇದರ ಪ್ರಮುಖ ಭಾಗವಾಗಿ ಅಡುಗೆ ಎಣ್ಣೆಯ ಮರುಬಳಕೆಯ ಕಾನೂನುಬಾಹಿರ ಚಟುವಟಿಕೆಗಳನ್ನೂ ತೀವ್ರವಾಗಿ ಪರಿಶೀಲಿಸಲಾಗುತ್ತಿದೆ" ಎಂದರು.
"ಹೊಟೇಲ್ಗಳಲ್ಲಿ ಬಳಕೆಯಾಗಿ ಉಳಿಯುವ ಹಾನಿಕಾರಕ ಎಣ್ಣೆಯನ್ನು ನೇರವಾಗಿ ತಿಪ್ಪೆಗೆ ಅಥವಾ ಚರಂಡಿಗೆ ಬಿಡುವುದನ್ನು ತಪ್ಪಿಸಿ, ಅದನ್ನು ಬಯೋಡೀಸೆಲ್ ತಯಾರಿಕೆ ಸೇರಿದಂತೆ ವಿವಿಧ ಕೈಗಾರಿಕಾ ಬಳಕೆಗಳಿಗೆ ಪುನರ್ಬಳಕೆ ಮಾಡಲು ನಿರ್ಧರಿಸಲಾಗಿದೆ. ಈ ಬಳಸಿದ ಎಣ್ಣೆಯನ್ನು ಖರೀದಿಸಲು ಈಗಾಗಲೇ ನಾಲ್ಕೈದು ಅಧಿಕೃತ ಕಂಪನಿಗಳು ಮುಂದೆ ಬಂದಿದ್ದು, ಹೊಟೇಲ್ಗಳು ಹಾಗೂ ದೊಡ್ಡ ಆಹಾರ ತಯಾರಿಕಾ ಸಂಸ್ಥೆಗಳಿಂದ ಈ ಕಂಪನಿಗಳು ಎಣ್ಣೆಯನ್ನು ಖರೀದಿಸಲಿವೆ" ಎಂದು ಮಾಹಿತಿ ನೀಡಿದರು.