ಮಂಗಳೂರು, ಅ.02 (DaijiworldNews/AA): ಸುಮಾರು 14 ವರ್ಷಗಳ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (ಎಸ್ಐಟಿ) ಗುರುವಾರ ಮಂಗಳೂರಿಗೆ ಆಗಮಿಸಿ ತನ್ನ ಮೊದಲ ಸಭೆಯನ್ನು ನಡೆಸಿದೆ.

ಕೆಲವು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್, ಹಳೆಯ ಎಸ್ಐಟಿ ಸದಸ್ಯರನ್ನು ಹೊರತುಪಡಿಸಿ ಹೊಸ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ನೂತನ ತನಿಖೆ ನಡೆಸಿ ನಿಗದಿತ ಅವಧಿಯೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದರಂತೆ ಐಜಿಪಿ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ನೂತನ ಎಸ್ಐಟಿ ತಂಡವನ್ನು ರಚಿಸಲಾಗಿದೆ.
ಗುರುವಾರ ಬೆಳಿಗ್ಗೆ ನಗರಕ್ಕೆ ಆಗಮಿಸಿದ ಎಸ್ಐಟಿ ಸದಸ್ಯರಾದ ಗುಪ್ತಚರ ವಿಭಾಗದ ಎಸ್ಪಿ ನಿಶಾ ಜೇಮ್ಸ್ ಹಾಗೂ ಸಿಐಡಿ ಎಸ್ಪಿ ಲೋಕೇಶ್ ಜಗಲಾಸರ್, ನಗರದ ಸ್ಟೇಟ್ ಬ್ಯಾಂಕ್ ಬಳಿಯಿರುವ ಹಳೆಯ ಉಪಆಯುಕ್ತರ (ಡಿಸಿ) ಕಚೇರಿ ಸಂಕೀರ್ಣದಲ್ಲಿ ಹೊಸದಾಗಿ ತೆರೆಯಲಾದ ಎಸ್ಐಟಿ ಕಚೇರಿಯನ್ನು ಪರಿಶೀಲಿಸಿದರು. ತದನಂತರ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು.
ಉಪಆಯುಕ್ತರ ಕಚೇರಿಯ ಎರಡನೇ ಮಹಡಿಯಲ್ಲಿರುವ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಕಚೇರಿಯ ಒಂದು ಭಾಗವನ್ನು ಎಸ್ಐಟಿ ಕಚೇರಿಯಾಗಿ ಪರಿವರ್ತಿಸಲಾಗಿದ್ದು, ತನಿಖೆಗೆ ಸಂಬಂಧಿಸಿದ ಕಾರ್ಯಗಳು ಈ ಕಚೇರಿಯಿಂದಲೇ ನಡೆಯಲಿವೆ ಎಂದು ತಿಳಿದುಬಂದಿದೆ.
ಮಧ್ಯಾಹ್ನದ ವೇಳೆಗೆ ಎಸ್ಐಟಿ ಮುಖ್ಯಸ್ಥ ಎನ್. ಶಶಿಕುಮಾರ್ ಅವರು ಎಸ್ಐಟಿ ಕಚೇರಿಗೆ ಭೇಟಿ ನೀಡಿದ್ದು, ಅಲ್ಲಿ ನಾಲ್ವರು ಹಿರಿಯ ಅಧಿಕಾರಿಗಳು ಹಾಗೂ 16 ಸಹಾಯಕ ಅಧಿಕಾರಿಗಳನ್ನೊಳಗೊಂಡ ಸಭೆ ನಡೆಯಿತು. ಹಳೆಯ ಪ್ರಕರಣದ ಕಡತಗಳನ್ನು ಪರಿಶೀಲಿಸುವುದರ ಜೊತೆಗೆ, ಮುಂದಿನ ತನಿಖೆಯ ರೂಪುರೇಷೆಗಳನ್ನು ತಯಾರಿಸಿ ಅಧಿಕಾರಿಗಳಿಗೆ ತನಿಖೆಯ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ. ಎಸ್ಐಟಿ ತಂಡದಲ್ಲಿರುವ ಮತ್ತೊಬ್ಬ ಐಪಿಎಸ್ ಅಧಿಕಾರಿ ವೆಂಕಟೇಶ್ ಪ್ರಸನ್ನ ಸಭೆಗೆ ಗೈರಾಗಿದ್ದರು.
ಸೌಜನ್ಯ ಪ್ರಕರಣದ ಮರುತನಿಖೆಯ ಹೊಣೆ ಹೊತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಗುರುವಾರ ಬೆಳ್ತಂಗಡಿಗೆ ಆಗಮಿಸಿ, ಪೊಲೀಸ್ ಠಾಣೆ ಬಳಿ ಇರುವ ಎಸ್ಐಟಿ ಕಚೇರಿಯನ್ನು ಪರಿಶೀಲಿಸಿದರು.
ಅಧಿಕಾರಿಗಳಾದ ನಿಶಾ ಜೇಮ್ಸ್ ಮತ್ತು ಲೋಕೇಶ್ ಜಗಲಾಸರ್ ಅವರು ಮಂಗಳೂರಿಗೆ ತೆರಳುವ ಮುನ್ನ ಈ ಕಚೇರಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು. ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹವನ್ನು ಹೂತುಹಾಕಲಾಗಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಿದ್ದ ಹಿಂದಿನ ಎಸ್ಐಟಿ ತಂಡದ ಕಚೇರಿಯು ಬೆಳ್ತಂಗಡಿ ಪೊಲೀಸ್ ಠಾಣೆ ಬಳಿಯ ಪೊಲೀಸ್ ವಸತಿ ಗೃಹದಲ್ಲಿತ್ತು. ಸೌಜನ್ಯ ಪ್ರಕರಣದ ಮರುತನಿಖೆ ನಡೆಸುತ್ತಿರುವ ಪ್ರಸ್ತುತ ಎಸ್ಐಟಿ ತಂಡವೂ ಅದೇ ಕಚೇರಿಯಿಂದ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.