ಮಂಗಳೂರು, ಅ.02 (DaijiworldNews/AA): ಈ ಹಿಂದೆ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ಪ್ರದೇಶವು ಬುಧವಾರ ಮಧ್ಯರಾತ್ರಿಯಿಂದ ಮೈಸೂರು ವಿಭಾಗದ ಆಡಳಿತಾತ್ಮಕ ವ್ಯಾಪ್ತಿಗೆ ಸೇರ್ಪಡೆಗೊಂಡು ಕಾರ್ಯಾಚರಣೆ ಆರಂಭಿಸಿದೆ. ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಎಡಿಆರ್ಎಂ) ಶಮ್ಮಾಸ್ ಹಮೀದ್ ಅವರು ಬುಧವಾರ ರಾತ್ರಿ ಸ್ಥಳೀಯ ವ್ಯವಸ್ಥೆಗಳನ್ನು ಪರಿಶೀಲಿಸಿ, ಸುಗಮ ಅಧಿಕಾರ ಹಸ್ತಾಂತರ ಹಾಗೂ ರೈಲು ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡರು.


ಮೈಸೂರು ವಿಭಾಗದ ವಿವಿಧ ಶಾಖಾಧಿಕಾರಿಗಳೊಂದಿಗೆ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ಹಾಗೂ ಜೋಕಟ್ಟೆ ಸೇರಿದಂತೆ ಪ್ರಮುಖ ರೈಲ್ವೆ ಕೇಂದ್ರಗಳಿಗೆ ಶಮ್ಮಾಸ್ ಭೇಟಿ ನೀಡಿ, ಅಲ್ಲಿನ ಕಾರ್ಯಾಚರಣೆಯ ಸಿದ್ಧತೆ ಮತ್ತು ಮೂಲಸೌಕರ್ಯಗಳನ್ನು ವೀಕ್ಷಿಸಿದರು. ಈ ವೇಳೆ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಅಧಿಕಾರಿಗಳು, ರೈಲುಗಳ ನಿರಂತರ ಸಂಚಾರಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಹಾಗೂ ಇತರೆ ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.
ವಿವಿಧ ವಿಭಾಗಗಳ ನಡುವಿನ ಪರಿಣಾಮಕಾರಿ ಸಮನ್ವಯತೆ, ಸಿಬ್ಬಂದಿಯ ಸಿದ್ಧತೆ, ರೈಲು ಕಾರ್ಯಾಚರಣೆ, ಸುರಕ್ಷತಾ ವ್ಯವಸ್ಥೆಗಳು, ನಿರ್ವಹಣಾ ಚಟುವಟಿಕೆಗಳು ಮತ್ತು ಪ್ರಯಾಣಿಕರ ಸೇವೆಗಳಿಗೆ ಈ ಭೇಟಿಯ ಸಂದರ್ಭದಲ್ಲಿ ವಿಶೇಷ ಒತ್ತು ನೀಡಲಾಯಿತು. ಕಾರ್ಯಾಚರಣೆಯ ಅಗತ್ಯತೆಗಳನ್ನು ತಕ್ಷಣವೇ ಈಡೇರಿಸಲು ಹಾಗೂ ಕ್ಷೇತ್ರ ಮಟ್ಟದ ಘಟಕಗಳು ಮತ್ತು ವಿಭಾಗೀಯ ಕಚೇರಿಯ ನಡುವೆ ನಿರಂತರ ಸಮನ್ವಯ ಕಾಯ್ದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಮಂಗಳೂರು ರೈಲ್ವೆ ಪ್ರದೇಶವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವುದು ಆಡಳಿತಾತ್ಮಕ ಹಾಗೂ ಕಾರ್ಯಾಚರಣೆಯ ದೃಷ್ಟಿಯಿಂದ ಅತ್ಯಂತ ಪ್ರಮುಖ ಬೆಳವಣಿಗೆಯಾಗಿದೆ.