ಉಡುಪಿ, ಅ.01 (DaijiworldNews/TA): ನಗರದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರಷ್ಯಾ ಪ್ರಜೆಯನ್ನು ಚಿಕಿತ್ಸೆ ಬಳಿಕ ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಗೋವಾದಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣವೊಂದು ವಿಚಾರಣೆಯಲ್ಲಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಲ್ಯಾಣಪುರ-ಸಂತೆಕಟ್ಟೆ ಸರ್ವಿಸ್ ರಸ್ತೆಯಲ್ಲಿ ರಷ್ಯಾ ಪ್ರಜೆಯೊಬ್ಬರು ಕುಸಿದು ಬಿದ್ದು ಅಸಹಾಯಕ ಸ್ಥಿತಿಯಲ್ಲಿ ಇರುವುದನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಗಮನಿಸಿದ್ದರು. ಕೂಡಲೇ ಅವರನ್ನು ರಕ್ಷಿಸಿ ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಪೊಲೀಸರು ನಡೆಸಿದ ವಿಚಾರಣೆಯಲ್ಲಿ, ರಷ್ಯಾ ಪ್ರಜೆಯ ಪ್ರವಾಸಿ ಪ್ರವೇಶ ಪರವಾನಗಿಯ ಅವಧಿ ಮುಗಿದಿರುವುದು ಹಾಗೂ ಅವರ ಪ್ರಯಾಣ ದಾಖಲೆಗಳು ನಿಷ್ಕ್ರಿಯಗೊಂಡಿರುವುದು ಪತ್ತೆಯಾಗಿದೆ. ಅಲ್ಲದೆ, ಗೋವಾದಲ್ಲಿ ಅವರ ವಿರುದ್ಧ ಪ್ರಕರಣವೊಂದು ವಿಚಾರಣೆಗೆ ಬಾಕಿ ಇರುವುದೂ ಪೊಲೀಸರ ಗಮನಕ್ಕೆ ಬಂದಿದೆ. ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ರಷ್ಯಾ ಪ್ರಜೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣದ ಭಯದಿಂದ ಅವರು ಆಸ್ಪತ್ರೆಯಿಂದ ಹೊರಗೆ ಹೋಗಿದ್ದರು ಎನ್ನಲಾಗಿದೆ. ಬಳಿಕ ನಗರದಲ್ಲಿ ಅಲೆದಾಡುತ್ತಿದ್ದ ಅವರನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದು ಮತ್ತೆ ಆಸ್ಪತ್ರೆಗೆ ದಾಖಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ನಿರ್ದೇಶನದಂತೆ, ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ರಷ್ಯಾ ಪ್ರಜೆಗೆ ಕಾರ್ಕಳದ ಹೊಸಬೆಳಕು ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಯಿತು.
ಈ ಅವಧಿಯಲ್ಲಿ ರಷ್ಯಾದಲ್ಲಿರುವ ಅವರ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಸಹ ಅವಕಾಶ ಮಾಡಿಕೊಡಲಾಯಿತು. ಪುನರ್ವಸತಿ ಕೇಂದ್ರದ ಸಂಯೋಜಕಿ ತನುಲಾ ತರುಣ್ ಅವರು ಅವರಿಗೆ ಆಹಾರ ಸೇರಿದಂತೆ ಅಗತ್ಯ ನೆರವು ಒದಗಿಸಿದರು. ಭದ್ರತೆಗಾಗಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಂತರ ರಷ್ಯಾ ಪ್ರಜೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ, ಗೋವಾದಲ್ಲಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಯಿತು.