ಮಂಗಳೂರು, ಅ.01 (DaijiworldNews/TA): ಎಂಆರ್ಪಿಎಲ್ನಲ್ಲಿ ಸಂಭವಿಸಿರುವ ಕಾರ್ಮಿಕರ ಸಾವಿನ ಘಟನೆಗೆ ಸಂಬಂಧಿಸಿದಂತೆ ಭಾರತೀಯ ಮಜ್ದೂರ್ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಕಾರ್ಮಿಕರ ಸುರಕ್ಷತೆ ಹಾಗೂ ಮೃತ ಮತ್ತು ಗಾಯಗೊಂಡ ಕಾರ್ಮಿಕರ ಕುಟುಂಬಗಳ ಹಕ್ಕುಗಳನ್ನು ಖಚಿತಪಡಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಘಟನೆಯಲ್ಲಿ ಕಾರ್ಮಿಕರು ಮೃತಪಟ್ಟಿರುವುದು ಹಾಗೂ ಹಲವರು ಗಾಯಗೊಂಡಿರುವುದು ಅತ್ಯಂತ ದುಃಖಕರ ಸಂಗತಿ ಎಂದು ತಿಳಿಸಿರುವ ಬಿಎಂಎಸ್, ಮೃತ ಕಾರ್ಮಿಕರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಗೊಂಡಿರುವ ಕಾರ್ಮಿಕರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ. ಘಟನೆಗೆ ಸಂಬಂಧಿಸಿದಂತೆ ಯಾರ ಮೇಲೂ ಪೂರ್ವಭಾವಿಯಾಗಿ ಆರೋಪ ಮಾಡುವುದು ಸರಿಯಲ್ಲ. ಆದರೆ ಪ್ರತಿಯೊಬ್ಬ ಕಾರ್ಮಿಕನ ಜೀವವೂ ಅಮೂಲ್ಯವಾಗಿದ್ದು, ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ಸಮಗ್ರ ತನಿಖೆಯಿಂದ ಹೊರಬರಬೇಕು ಎಂದು ಬಿಎಂಎಸ್ ಹೇಳಿದೆ.
ತಾಂತ್ರಿಕ ಹಾಗೂ ಕಾನೂನುಬದ್ಧ ರೀತಿಯಲ್ಲಿ ತನಿಖೆ ನಡೆಸಿ, ಘಟನೆಯ ಸಂಪೂರ್ಣ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿರುವ ಸಂಘಟನೆ, ಮೃತ ಹಾಗೂ ಗಾಯಗೊಂಡ ಕಾರ್ಮಿಕರ ಕುಟುಂಬಗಳಿಗೆ ಕಾನೂನುಬದ್ಧ ಪರಿಹಾರ, ವೈದ್ಯಕೀಯ ನೆರವು ಮತ್ತು ಅಗತ್ಯ ಸೌಲಭ್ಯಗಳನ್ನು ಯಾವುದೇ ವಿಳಂಬವಿಲ್ಲದೆ ಒದಗಿಸಬೇಕು ಎಂದು ಎಂಆರ್ಪಿಎಲ್ ಆಡಳಿತ ಮತ್ತು ಸಂಬಂಧಪಟ್ಟ ಗುತ್ತಿಗೆದಾರರಿಗೆ ಮನವಿ ಮಾಡಿದೆ.
ಇದೇ ವೇಳೆ ಎಂಆರ್ಪಿಎಲ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಶ್ವತ ಹಾಗೂ ಗುತ್ತಿಗೆ ಕಾರ್ಮಿಕರ ಸುರಕ್ಷತಾ ವ್ಯವಸ್ಥೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಬಿಎಂಎಸ್ ತಿಳಿಸಿದೆ. ಸುರಕ್ಷತಾ ತರಬೇತಿ, ವೈಯಕ್ತಿಕ ರಕ್ಷಣಾ ಸಾಧನಗಳು (PPE), ವರ್ಕ್ ಪರ್ಮಿಟ್ ವ್ಯವಸ್ಥೆ, ತುರ್ತು ಪರಿಸ್ಥಿತಿ ನಿರ್ವಹಣಾ ಕ್ರಮಗಳು ಸೇರಿದಂತೆ ಎಲ್ಲಾ ಸುರಕ್ಷತಾ ಮಾನದಂಡಗಳು ಪರಿಣಾಮಕಾರಿಯಾಗಿ ಜಾರಿಯಲ್ಲಿವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದೆ. ತನಿಖೆಯಲ್ಲಿ ಯಾರದ್ದೇ ತಪ್ಪು ಅಥವಾ ನಿರ್ಲಕ್ಷ್ಯ ಸಾಬೀತಾದರೆ, ಕಾನೂನು ಪ್ರಕಾರ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಬಿಎಂಎಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತಿಳಿಸಿದೆ.
“ಕಾರ್ಮಿಕರ ಸುರಕ್ಷತೆ ಮೊದಲು, ಕಾರ್ಮಿಕರ ಕುಟುಂಬಗಳಿಗೆ ನ್ಯಾಯ ಮೊದಲು” ಎಂಬುದು ಸಂಘಟನೆಯ ನಿಲುವಾಗಿದೆ ಎಂದು ಹೇಳಿರುವ ಬಿಎಂಎಸ್, ಎಂಆರ್ಪಿಎಲ್ ಆಡಳಿತ, ಕಾರ್ಮಿಕ ಇಲಾಖೆ, ಕೈಗಾರಿಕಾ ಸುರಕ್ಷತಾ ಅಧಿಕಾರಿಗಳು ಹಾಗೂ ಜಿಲ್ಲಾಡಳಿತವು ಸಮನ್ವಯದಿಂದ ಕಾರ್ಯನಿರ್ವಹಿಸಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಈ ಕುರಿತು ಬಿಎಂಎಸ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.