ಮಂಗಳೂರು, ಸೆ.30 (DaijiworldNews/AA): ಜೋಕಟ್ಟೆ ಸಮೀಪದ ಮಂಗಳೂರು ರಿಫೈನರಿ ಅಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಘಟಕದ 'ಕೋಕರ್ ಹೈಡ್ರೋಟ್ರೀಟರ್' (ಸಿಹೆಚ್ಟಿ) ವಿಭಾಗದಲ್ಲಿ ಬುಧವಾರ ಭಾರೀ ಸ್ಫೋಟ ಸಂಭವಿಸಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಹೊಗೆ ಆವರಿಸಿದೆ.


ಕೂಡಲೇ ಘಟಕದಲ್ಲಿದ್ದವರನ್ನು ಹೊರಕರೆತರಲಾಗಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ. ಪ್ರಸ್ತುತ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಎಂಆರ್ಪಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್ಒ) ಡಾ. ರೂಡಾಲ್ಫ್ ತಿಳಿಸಿದ್ದಾರೆ.
ಡಾ. ರೂಡಾಲ್ಫ್ ಅವರ ಪ್ರಕಾರ, ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ. ರಾಜೇಶ್ ಬಾಪ್ಟಿಸ್ಟ್ ಎಂಬುವರಿಗೆ ಸುಮಾರು ಶೇ. 35ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿದ್ದು (ಐಸಿಯು), ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಪಕ್ಕದ ಕಚೇರಿಯಲ್ಲಿದ್ದ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಹೊರರೋಗಿ ವಿಭಾಗದಲ್ಲಿ (ಒಪಿಡಿ) ಚಿಕಿತ್ಸೆ ಮತ್ತು ತಪಾಸಣೆ ನಡೆಸಲಾಗಿದೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಸ್ಫೋಟದಿಂದ ಎಂಆರ್ಪಿಎಲ್ ಸಮೀಪದ ಬಜ್ಜೆ ಕಳವಾರು, ಬೈಕಂಪಾಡಿ, ಜೋಕಟ್ಟೆ, ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ಭೂಕಂಪದ ರೀತಿಯ ಅನುಭವವಾಗಿದೆ. ಸ್ಫೋಟದಿಂದ ಉಂಟಾದ ಭಾರೀ ಶಬ್ದವು ಬೈಕಂಪಾಡಿ, ಸುರತ್ಕಲ್ ವರೆಗೂ ಕೇಳಿಬಂದಿದೆ. ಮಂಗಳೂರು ಏರ್ಪೋಟ್ ಬಳಿಯೂ ದಟ್ಟ ಹೊಗೆ ಆವರಿಸಿದ್ದು, ಆತಂಕ ನಿರ್ಮಾಣವಾಗಿದೆ.
ಜೋಕಟ್ಟೆ ಪಂಚಾಯತ್ ಕಟ್ಟಡ ಸೇರಿದಂತೆ ಅಲ್ಲಿನ ಸುತ್ತಮುತ್ತಲಿನ ಮನೆಗಳು ಕಂಪಿಸಿದೆ. ಕೆಲವು ಕಟ್ಟಡಗಳು ಬಿರುಕು ಬಿಟ್ಟಿದ್ದು, ಬಾಗಿಲು ಕಿಟಕಿಗಳು ಉದುರಿವೆ. ಜನರು ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಪಂಚಾಯತ್ ಕಟ್ಟಡದ ಬಳಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಂಗಳೂರು, ಪಾಂಡೇಶ್ವರ ಸೇರಿದಂತೆ ಆಸುಪಾಸಿನ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು ಕಾರ್ಯಾಚರಣೆ ನಡೆಸುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.