ಮಂಗಳೂರು, ಸೆ.19 (DaijiworldNews/TA): ಮಂಗಳೂರಿನಲ್ಲಿ ಶುಕ್ರವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳ್ಳಂಬೆಳಗ್ಗೆ ಮಂಗಳೂರು ಮೀನುಗಾರಿಕಾ ಬಂದರಿಗೆ ದಿಢೀರ್ ಭೇಟಿ ನೀಡಿ, ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಭದ್ರತಾ ಕಾರಣಕ್ಕಾಗಿ ಬಂದರಿನ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿರುವುದನ್ನು ಕಂಡು ಮುಖ್ಯಮಂತ್ರಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರೊಂದಿಗೆ ಬಂದರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್, ಧಕ್ಕೆ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸುತ್ತಾಡಿ ಮೀನುಗಾರಿಕಾ ಬೋಟ್ಗಳು, ಮೀನು ಇಳಿಸುವಿಕೆ ಹಾಗೂ ಮಾರುಕಟ್ಟೆ ಚಟುವಟಿಕೆಗಳನ್ನು ಪರಿಶೀಲಿಸಿದರು. ಸಮುದ್ರದಿಂದ ಬಂದಿದ್ದ ತಾಜಾ ಮೀನುಗಳನ್ನು ವೀಕ್ಷಿಸಿದ ಅವರು, ಮೀನುಗಾರರು ಹಾಗೂ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳನ್ನು ಮುಂದಿಟ್ಟು ಬಂದರಿನ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಮೀನುಗಾರರು ಹಾಗೂ ವ್ಯಾಪಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ವ್ಯಾಪಾರ-ವಹಿವಾಟು ಏಕೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ, ಮೀನುಗಾರರ ದೈನಂದಿನ ಬದುಕಿಗೆ ತೊಂದರೆಯಾಗುವ ರೀತಿಯಲ್ಲಿ ಚಟುವಟಿಕೆಗಳನ್ನು ಬಂದ್ ಮಾಡಬಾರದು ಎಂದು ಸೂಚಿಸಿದರು. ಈ ನಿರ್ಧಾರಕ್ಕೆ ಕಾರಣರಾದವರ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಅಮಾನತು ಸೇರಿದಂತೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮೀನುಗಾರರು ಬಂದರಿನ ಮೂಲಸೌಕರ್ಯ, ಧಕ್ಕೆ ಪ್ರದೇಶದ ಸೌಲಭ್ಯಗಳು, ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟರು. ಮೀನುಗಾರಿಕಾ ಚಟುವಟಿಕೆಗಳಿಗೆ ಅಗತ್ಯವಿರುವ ಮೂಲಸೌಕರ್ಯ ಮತ್ತು ಸೌಲಭ್ಯಗಳ ಕುರಿತು ಸಿಎಂ ಸ್ಥಳದಲ್ಲೇ ಮಾಹಿತಿ ಪಡೆದರು. ಮೀನುಗಾರಿಕಾ ಕ್ಷೇತ್ರದ ಸಮಸ್ಯೆಗಳನ್ನು ನೇರವಾಗಿ ತಿಳಿದುಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಬಂದರಿಗೆ ಭೇಟಿ ನೀಡಿರುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲೂ ಕರಾವಳಿಯ ಮೀನುಗಾರಿಕೆ, ಬಂದರು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿತ್ತು. ಅದರ ಬೆನ್ನಲ್ಲೇ ಮುಖ್ಯಮಂತ್ರಿಗಳ ಮೀನುಗಾರಿಕಾ ಬಂದರು ಭೇಟಿ ಗಮನ ಸೆಳೆದಿದೆ.