ಕಾಸರಗೋಡು, ಸೆ. 08 (DaijiworldNews/AA): ವೃದ್ಧ ಸಹೋದರರಿಬ್ಬರು ಕೆಲವೇ ಗಂಟೆಗಳ ಅಂತರದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಭಾನುವಾರ ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ಉಬ್ರಂಗಳದಲ್ಲಿ ನಡೆದಿದೆ.

ಮೃತರನ್ನು ಉಬ್ರಂಗಳ ನಿವಾಸಿಗಳಾದ ರಾಮಕೃಷ್ಣ ಭಟ್ (70) ಹಾಗೂ ಅವರ ಕಿರಿಯ ಸಹೋದರ ಕೇಶವ ಭಟ್ (65) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಭಾನುವಾರ ಸಂಜೆ ರಾಮಕೃಷ್ಣ ಭಟ್ ಅವರು ಜಾನುವಾರುಗಳಿಗೆ ನೀರು ನೀಡಲು ಕೊಟ್ಟಿಗೆಗೆ ತೆರಳಿದ್ದರು. ಇದೇ ವೇಳೆ ಕೇಶವ ಭಟ್ ಅವರು ಮನೆಯೊಳಗೆ ಪೂಜಾ ಕಾರ್ಯದಲ್ಲಿ ತೊಡಗಿದ್ದರು. ಪೂಜೆ ಮುಗಿಸಿ ಹೊರಗೆ ಬಂದ ಕೇಶವ ಭಟ್ ಅವರಿಗೆ ಕೊಟ್ಟಿಗೆಯ ಸಮೀಪ ತಮ್ಮ ಸಹೋದರ ರಾಮಕೃಷ್ಣ ಭಟ್ ಕುಸಿದು ಬಿದ್ದಿರುವುದು ಕಂಡುಬಂದಿದೆ.
ಕೂಡಲೇ ಕೇಶವ ಭಟ್ ಅವರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಾಮಕೃಷ್ಣ ಭಟ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯಕೀಯ ಚಿಕಿತ್ಸೆ ನೀಡಿದರೂ ಅವರು ಬದುಕುಳಿಯಲಿಲ್ಲ.
ರಾಮಕೃಷ್ಣ ಭಟ್ ಅವರ ನಿಧನದಿಂದ ಆಘಾತಕ್ಕೊಳಗಾದ ಕಿರಿಯ ಸಹೋದರ ಕೇಶವ ಭಟ್ ಅವರು ಕೆಲವೇ ಗಂಟೆಗಳ ಬಳಿಕ ಮನೆಯಲ್ಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣ ಅವರನ್ನು ಕೂಡ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.