ಬಂಟ್ವಾಳ, ಸೆ. 08 (DaijiworldNews/AA): ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ನಡುಮನೆ, ಸುದೆಕಟ್ಟೆಮಾರು ಹಾಗೂ ಪುಂಜಾವು ಭಾಗದ ಸಾರ್ವಜನಿಕರು ಸುಮಾರು 150ಕ್ಕೂ ಹೆಚ್ಚು ವರ್ಷಗಳಿಂದ ಬಳಸುತ್ತಿದ್ದ ಪ್ರಮುಖ ಕಾಲುದಾರಿಯನ್ನು ಬಂದ್ ಮಾಡಲಾಗಿದ್ದು, ಇದನ್ನು ತಕ್ಷಣವೇ ತೆರವುಗೊಳಿಸುವಂತೆ ಆಗ್ರಹಿಸಿ ಸ್ಥಳೀಯರು ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.




ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಈ ಹಳೆಯ ಕಾಲುದಾರಿಯನ್ನೇ ನೆಚ್ಚಿಕೊಂಡಿದ್ದಾರೆ, ಇದೀಗ ಈ ದಾರಿ ಬಂದ್ ಆಗಿರುವುದರಿಂದ ಶಾಲೆ, ಅಂಗನವಾಡಿ, ಹಾಲಿನ ಡೈರಿ, ಅಂಚೆ ಕಚೇರಿ ಹಾಗೂ ಆಸ್ಪತ್ರೆಗೆ ತೆರಳುವ ಸಾರ್ವಜನಿಕರು ಮತ್ತು ವೃದ್ಧರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ವೃದ್ಧಾಪ್ಯ ವೇತನ ಮುಂತಾದ ಸೌಲಭ್ಯಗಳನ್ನು ಪಡೆಯಲು ಅಂಚೆ ಕಚೇರಿಗೆ ಹೋಗಲಾಗದೆ ಹಿರಿಯ ನಾಗರಿಕರು ಪರದಾಡುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಬಂದ್ ಆಗಿರುವ ಈ ಕಾಲುದಾರಿಯನ್ನು ತಕ್ಷಣವೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ತಹಶೀಲ್ದಾರರನ್ನು ಒತ್ತಾಯಿಸಿದ್ದಾರೆ.