ಕಾಸರಗೋಡು,ಸೆ. 08 (DaijiworldNews/AK): ಕುಂಬಳೆ ಸಮೀಪದ ಶಿರಿಯಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ಕರಾವಳಿ ಪೊಲೀಸರು ದಾಳಿ ನಡೆಸಿದ ವೇಳೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಜಿಗಿದ ಮೂವರಲ್ಲಿ ಓರ್ವ ನಾಪತ್ತೆಯಾಗಿದ್ದಾನೆ.

ಆರಿಕ್ಕಾಡಿ ಕಡವತ್ ನಿವಾಸಿ ಇಬ್ರಾಹಿಂ (26) ನಾಪತ್ತೆಯಾದವರು. ಉಳಿದ ಇಬ್ಬರು ಈಜಿಕೊಂಡು ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ಶಿರಿಯಾ ನದಿಯ ಆರಿಕ್ಕಾಡಿ ಕಡವತ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ನದಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಕರಾವಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಪೊಲೀಸರ ಬೋಟ್ ಬರುತ್ತಿರುವುದನ್ನು ಕಂಡ ಆರೋಪಿಗಳು ತಾವು ಮರಳು ತುಂಬಿಸುತ್ತಿದ್ದ ದೋಣಿಯನ್ನು ನದಿಯಲ್ಲೇ ಬಿಟ್ಟು ನೀರಿಗೆ ಜಿಗಿದಿದ್ದಾರೆ. ಕತ್ತಲಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ.
ಆದರೆ ನೀರಿನ ರಭಸಕ್ಕೆ ಸಿಲುಕಿದ ಇಬ್ರಾಹಿಂ ನಾಪತ್ತೆಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಪೊಲೀಸರು ನದಿಯಲ್ಲಿ ತೀವ್ರ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.