ಮಂಗಳೂರು, ಸೆ. 08 (DaijiworldNews/AK): ಯೇಸು ಕ್ರಿಸ್ತರ ತಾಯಿ ಮೇರಿ ಮಾತೆಯನ್ನು ಜಾಗತಿಕವಾಗಿ ಪೂಜ್ಯ ಭಾವದಿಂದ ಕೆಥೋಲಿಕರು ಆರಾಧಿಸುತ್ತಿದ್ದು ಅವರ ಜನನದ ದಿನವಾದ ಸೆ. 8 ಅನ್ನು 'ಮೊಂತಿ ಫೆಸ್ಟ್' ಆಗಿ ಆಚರಿಸಲಾಗುತ್ತಿದೆ. ಇದರೊಂದಿಗೆ ಹೊಸ ಬೆಳೆಗಾಗಿ ಕರ್ತರಿಗೆ ಮಹಿಮೆ ಸಲ್ಲಿಸಿ 'ತೆನೆ ಹಬ್ಬ'ವಾಗಿಯೂ ಸಂಭ್ರಮಿಸಲಾಗುತ್ತಿದೆ.




ಮಂಗಳೂರು ಬಿಷಪ್ ಅ। ವಂ। ಡಾ| ಪೀಟರ್ಪಾವ್ ಸಲ್ವಾನ್ಹಾ ಅವರು ಮಂಗಳೂರಿನ ಜಪ್ಪು ಸಂತ ಅಂತೋನಿ ಆಶ್ರಮದಲ್ಲಿ ಬೆಳಗ್ಗೆ ಹಬ್ಬದ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ವಿವಿಧ ಚರ್ಚ್ಗಳಲ್ಲಿ ವಿಶೇಷ ಬಲಿಪೂಜೆ, ಮಾತೆ ಮೇರಿಗೆ ಹೂ ಅರ್ಪಣೆಯೊಂದಿಗೆ ಪ್ರಾರ್ಥನೆ ನಡೆಯುತ್ತವೆ. ಬಳಿಕ ಮನೆಯಲ್ಲಿ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಲಾಗುತ್ತದೆ.
ನವದಿನಗಳ ನೊವೆನಾದ ಜತೆಗೆ ಹಬ್ಬದಂದು ಮಕ್ಕಳು ಬಾಲ ಮಾತೆಗೆ ಹೂಗಳನ್ನು ಅರ್ಪಿಸುತ್ತಾರೆ. ತೆನೆ ಆಶೀರ್ವಚನ ನಡೆಸಿ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಬಲಿಪೂಜೆಯ ಅಂತ್ಯದಲ್ಲಿ ಎಲ್ಲರಿಗೂ ತೆನೆ ಹಂಚಲಾಗುತ್ತದೆ. ಇದರೊಂದಿಗೆ ಸಿಹಿತಿಂಡಿ, ಕಬ್ಬು ವಿತರಿಸಲಾಗುತ್ತದೆ.