ಬೆಳ್ತಂಗಡಿ, ಸೆ. 07 (DaijiworldNews/TA): ಭಾರೀ ಮಳೆ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ದಿಡುಪೆ ಜಲಪಾತ (ಕಡಮಗುಂಡಿ) ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು. ಇದೀಗ ಮಳೆ ಕಡಿಮೆಯಾಗಿರುವುದರಿಂದ ಸೆ. 7ರಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿವೆ ಎಂದು ವನ್ಯಜೀವಿ ಜೀವಿ ವಿಭಾಗದ ಅಧಿಕಾರಿ ಶರ್ಮಿಷ್ಟಾ ಮಾಹಿತಿ ನೀಡಿದ್ದಾರೆ.

ಜುಲೈ 20ರಿಂದ ದಿಡುಪೆ ಫಾಲ್ಸ್ (ಕಡಮಗುಂಡಿ) ಜಲಪಾತಕ್ಕೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇದೀಗ ಮಳೆಯ ಪರಿಸ್ಥಿತಿ, ಜಲಪಾತದ ಸುರಕ್ಷೆಯನ್ನು ಪರಿಶೀಲಿಸಿ ಪ್ರವೇಶ ನಿರ್ಬಂಧವನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ. ನೀರಿನ ಹರಿವು, ಕಲ್ಲುಗಳ ಮೇಲಿನ ಜಾರುವಿಕೆ, ಹವಾಮಾನ ಪರಿಸ್ಥಿತಿ ಗಮನದ ಲ್ಲಿಟ್ಟು ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಇನ್ನು ಅತ್ತ ಗಡಾಯಿಕಲ್ಲಿನ ಮೇಲ್ಭಾಗದಿಂದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಗಡಾಯಿಕಲ್ಲು ಚಾರಣಕ್ಕೆ ವಿಧಿಸಲಾಗಿರುವ ನಿಷೇಧ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.