ದಕ್ಷಿಣ ಕನ್ನಡ, ಸೆ. 07 (DaijiworldNews/TA): ಅಕ್ರಮ ಮರಳುಗಾರಿಕೆ ತಡೆಯುವ ದೃಷ್ಟಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ದ.ಕ. ಜಿಲ್ಲೆಯ ಸುಮಾರು 30 ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಕೆಲವೊಂದು ಕಡೆಗಳ ಕ್ಯಾಮರಾಗಳೇ ಮಾಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಎಲ್ಲ ಕ್ಯಾಮರಾಗಳ ಪ್ರಸ್ತುತ ಸ್ಥಿತಿಯನ್ನು ಅರಿಯುವ ದೃಷ್ಟಿಯಿಂದ ಇಲಾಖೆ ಪರಿಶೀಲನೆ ನಡೆಸಲು ಆರಂಭಿಸಿದೆ.

ಮರಳು ಅಕ್ರಮ ಸಾಗಣೆ ಕುರಿತು ಅತೀ ಹೆಚ್ಚಿನ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಿಗದಿತ ಜಾಗಗಳನ್ನು ಗುರುತಿಸಿ ಇಲಾಖೆ ಸೋಲಾರ್ ವಿದ್ಯುತ್ ಆಧಾರಿತ ಕ್ಯಾಮರಾಗಳನ್ನು ಅಳವಡಿಸಿತ್ತು. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ 4 ಕಡೆ ಹಾಗೂ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ 26 ಕಡೆ ಕ್ಯಾಮರಾಗಳ ಅಳವಡಿಕೆಯಾಗಿತ್ತು.
ಎಲ್ಲೆಲ್ಲಿ ಸಿಸಿ ಕ್ಯಾಮರಾ ಅಳವಡಿಕೆ: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪುದು ಗ್ರಾಮದ ದೇವರಪಾಲು, ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ, ಸಜೀಪನಡುವಿನ ಮಿತ್ತಪಡ್ಪು ಸರ್ಕಲ್ ಕೋಟೆಕಣಿ, ನೇತ್ರಾವತಿ ನದಿ ಕಿನಾರೆ ಜುಮಾ ಮಸೀದಿ ಬಳಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಕೋಣಾಜೆ ಠಾಣೆಯ ಅಂಬ್ಲಮೊಗರು ಬಸ್ತಿಕಟ್ಟೆ ಬಸ್ ನಿಲ್ದಾಣ, ಮುನ್ನೂರು ಗ್ರಾಮದ ಸೋಮೇಶ್ವರ ಉಳಿಯ ಮಹಾದ್ವಾರ, ಎಲ್ಯಾರ್ ಪದವು ಚರ್ಚ್ ಬಳಿ, ಹರೇಕಳ ಕಡವಿನ ಬಳಿ, ಇನೋಳಿಪದವು, ಉಳ್ಳಾಲ ಠಾಣೆಯ ತಲಪಾಡಿ ಟೋಲ್ ಆಟೋ ನಿಲ್ದಾಣದ ಬಳಿ, ಉಳ್ಳಾಲ ಸೋಮೇಶ್ವರ ಮಹಾದ್ವಾರದ ಬಳಿ, ಮೂಲ್ಕಿ ಠಾಣೆಯ ಹಳೆಯಂಗಡಿ ಬಸ್ ನಿಲ್ದಾಣದ ಬಳಿ, ಹಳೆಯಂಗಡಿ ಚೇಳ್ಯಾರ್ ಕ್ರಾಸ್ ಬಳಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯ ಅರ್ಕುಳ ವಳಚ್ಚಿಲ್ ಮಸೀದಿ ಬಳಿ, ವಳಚ್ಚಿಲ್, ಅಡ್ಯಾರ್ ಬಳಿ, ಉಳಾಯಿಬೆಟ್ಟು ಮಲ್ಲೂರು, ಇಡ್ಯಾ, ಕಂಕನಾಡಿ ನಗರ ಠಾಣೆಯ ಕಣ್ಣೂರು ಮಸೀದಿ ಬಳಿ, ಕಣ್ಣೂರು ಬಡ್ಲ, ಬಜಾಲ್ ಫೈಸಲ್ ನಗರ, ಜಪ್ಪಿನಮೊಗರು ಕಡೇಕಾರ್, ತಾರೆದೋಲ್ಯ, ಪೆರ್ಮನ್ನೂರು ಆಡಂಕುದ್ರು, ಬಜಪೆ ಠಾಣೆಯ ಅದ್ಯಪಾಡಿ ಮರವೂರು ಸೇತುವೆ, ಅದ್ಯಪಾಡಿ, ಅಡ್ಡೂರು ಜಂಕ್ಷನ್, ಕಾವೂರು ಠಾಣೆಯ ಪಡುಶೆಡ್ಡೆ ರೈಲ್ವೇ ಅಂಡರ್ ಪಾಸ್ ಬಳಿ, ಪಡುಶೆಡ್ಡೆ ದೈವಸ್ಥಾನದ ಬಳಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.
ಇಲಾಖೆಯ ತನಿಖೆ ಅಗತ್ಯ: ನಿರ್ದಿಷ್ಟ ಆಯಕಟ್ಟಿನ ಜಾಗಗಳಲ್ಲಿ ಒಂದು ಕಂಬವನ್ನು ಅಳವಡಿಸಿ ಕಬ್ಬಿಣದ ಪೆಟ್ಟಿಗೆಯನ್ನು ಅಳವಡಿಸಿ ಅದರೊಳಗೆ ಕ್ಯಾಮರಾ ಅಳವಡಿಕೆ ಮಾಡಲಾಗಿತ್ತು. ಆದರೆ ಕೆಲವೊಂದು ಕಡೆಗಳಲ್ಲಿ ಕಂಬಗಳು ಮಾತ್ರ ಇದ್ದು, ಅದರಲ್ಲಿದ್ದ ಕ್ಯಾಮರಾ ಮಾಯವಾಗಿದೆ. ಅವುಗಳಿಗೆ ಹಾನಿ ಮಾಡಿದವರು ಯಾರು ಎಂಬ ನಿಟ್ಟಿನಲ್ಲಿ ಇಲಾಖೆ ತನಿಖೆ ಮಾಡಬೇಕಿದೆ. ಈ ರೀತಿ ಕ್ಯಾಮರಾಗಳನ್ನು ತೆಗೆಯುವಲ್ಲಿ ಮರಳು ಮಾಫಿಯಾ ಕೆಲಸ ಮಾಡಿದೆಯೇ ಅಥವಾ ಕಿಡಿಗೇಡಿಗಳು ಹಾನಿ ಮಾಡಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪರಿಶೀಲನೆ ನಡೆಯಬೇಕು ಎಂಬ ಆಗ್ರಹ ಕೇಳಿಬಂದಿದೆ.