ಬಂಟ್ವಾಳ, ಸೆ. 07 (DaijiworldNews/TA): ದಿನದಿಂದ ದಿನಕ್ಕೆ ಜನದಟ್ಟಣೆಯ ನಗರವಾಗಿ ಬೆಳೆಯುತ್ತಿರುವ ಬಂಟ್ವಾಳದ ಬಿ.ಸಿ.ರೋಡಿನಲ್ಲಿ ವಾಹನ ದಟ್ಟಣೆ ಹಾಗೂ ನಿತ್ಯದ ಟ್ರಾಫಿಕ್ ಜಾಮ್ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಕೈಕಂಬದವರೆಗೆ ಬೆಳಗ್ಗೆ ಹಾಗೂ ಸಂಜೆ ವೇಳೆ ವಾಹನ ಸಂಚಾರ ದಟ್ಟಣೆಯಿಂದ ರಸ್ತೆಯಲ್ಲಿ ಸಂಚರಿಸುವುದೇ ಸವಾಲಾಗಿ ಪರಿಣಮಿಸುತ್ತಿದೆ.

ಸುಮಾರು ಎರಡು ದಶಕಗಳ ಹಿಂದೆ ಈ ಭಾಗದಲ್ಲಿ ದ್ವಿಪಥ ರಸ್ತೆ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ರಸ್ತೆ ಬದಿಯ ಅಗಲೀಕರಣವೂ ನಡೆದಿದ್ದರೂ, ನಗರ ಬೆಳವಣಿಗೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಿದ ಪ್ರಮಾಣಕ್ಕೆ ಅನುಗುಣವಾಗಿ ರಸ್ತೆ ವಿಸ್ತರಣೆ ಸಾಧ್ಯವಾಗಿಲ್ಲ. ಪರಿಣಾಮವಾಗಿ ಇದೀಗ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಟ್ರಾಫಿಕ್ ಜಾಮ್ ಸಮಸ್ಯೆ ತೀವ್ರಗೊಂಡಿದೆ. ಹೀಗಾಗಿ ಕಲ್ಲಡ್ಕ ಮಾದರಿಯಲ್ಲಿ ಬಿ.ಸಿ.ರೋಡು ಸರ್ಕಲ್ನಿಂದ ಕೈಕಂಬದವರೆಗೆ 6-ಲೇನ್ ಫ್ಲೈಓವರ್ ನಿರ್ಮಿಸಬೇಕೆಂಬ ಕೂಗು ಕೂಡ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಬಿ.ಸಿ.ರೋಡು ನಗರ ವಿಸ್ತಾರಗೊಳ್ಳುತ್ತಿದ್ದಂತೆ ರಸ್ತೆ ಬದಿಯಲ್ಲಿ ಅಂಗಡಿ, ವಾಣಿಜ್ಯ ಮಳಿಗೆ ಹಾಗೂ ಇತರ ಚಟುವಟಿಕೆಗಳು ಹೆಚ್ಚುತ್ತಿವೆ. ಇದರಿಂದ ರಸ್ತೆ ಬದಿಯ ಲಭ್ಯ ಜಾಗ ಮತ್ತಷ್ಟು ಕಡಿಮೆಯಾಗಿದ್ದು, ವಾಹನ ನಿಲುಗಡೆ ಹಾಗೂ ಪಾದಚಾರಿಗಳ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ ಎಂಬುದು ಸಾರ್ವಜನಿಕರ ಅಳಲು.
ಒಂದೆಡೆ ಬಿ.ಸಿ.ರೋಡು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಅದಕ್ಕೆ ತಕ್ಕಂತೆ ರಸ್ತೆ ಹಾಗೂ ಸಂಚಾರ ವ್ಯವಸ್ಥೆ ಅಭಿವೃದ್ಧಿಯಾಗದಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ನಗರ ಬೆಳೆಯುತ್ತಿದ್ದರೂ ರಸ್ತೆ ಮಾತ್ರ ಹಳೆಯ ಅಳತೆಯಲ್ಲೇ ಉಳಿದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಬಿ.ಸಿ.ರೋಡಿನ ನಿತ್ಯದ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಪ್ರಸ್ತಾಪಿಸಿದ್ದಾರೆ. ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತದ ಗಮನ ಸೆಳೆಯಲಾಗಿದೆ. ಈ ಸಂದರ್ಭದಲ್ಲಿ ಕಲ್ಲಡ್ಕದಲ್ಲಿ ನಿರ್ಮಿಸಲಾಗಿರುವ ಮಾದರಿಯಲ್ಲಿ ಬಿ.ಸಿ.ರೋಡು ಸರ್ಕಲ್ ನಿಂದ ಕೈಕಂಬದವರೆಗೆ 6-ಲೇನ್ ಫ್ಲೈಓವರ್ ನಿರ್ಮಿಸಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಒತ್ತಾಯಿಸಿದ್ದಾರೆ.
ಸರ್ಕಾರದ ಮುಂದಿದೆ ಆರು ಲೇನ್ ರಸ್ತೆಯ ಪ್ರಸ್ತಾಪ : ಕಲ್ಲಡ್ಕ–ಕೈಕಂಬ ಭಾಗದಲ್ಲಿ ಆರು ಲೇನ್ ರಸ್ತೆ ನಿರ್ಮಾಣದ ಪ್ರಸ್ತಾಪವೂ ಸರ್ಕಾರದ ಮುಂದಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗೆ ವೇಗ ದೊರೆತರೆ ಬಿಸಿರೋಡು ಸೇರಿದಂತೆ ಈ ಭಾಗದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಸಾಧ್ಯವಾಗಲಿದೆ. ಆದರೆ, ದೊಡ್ಡ ಯೋಜನೆಗಳು ಅನುಷ್ಠಾನಗೊಳ್ಳುವವರೆಗೆ ಸಾರ್ವಜನಿಕರು ನಿತ್ಯ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗೆ ತಾತ್ಕಾಲಿಕ ಹಾಗೂ ತುರ್ತು ಪರಿಹಾರ ಕಲ್ಪಿಸುವ ಅಗತ್ಯವೂ ಇದೆ. ರಸ್ತೆ ಬದಿಯ ಅತಿಕ್ರಮಣ, ಅಸಮರ್ಪಕ ವಾಹನ ನಿಲುಗಡೆ ಹಾಗೂ ಸಂಚಾರಕ್ಕೆ ಅಡ್ಡಿಯಾಗುವ ಇತರ ಅಂಶಗಳನ್ನು ನಿಯಂತ್ರಿಸುವ ಜೊತೆಗೆ, ಭವಿಷ್ಯದ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ಸಂಚಾರ ವ್ಯವಸ್ಥೆ ರೂಪಿಸಬೇಕಿದೆ.