ಬಂಟ್ವಾಳ, ಸೆ. 03 (DaijiworldNews/AA): ನಗರಸಭೆ ಮಾಡಬೇಕಿದ್ದ ಚರಂಡಿ ಸ್ವಚ್ಛತಾ ಕಾರ್ಯವನ್ನು ನಿವೃತ್ತ ಮುಖ್ಯ ಶಿಕ್ಷಕರೊಬ್ಬರು ಸ್ವಂತ ಖರ್ಚಿನಲ್ಲಿ ಮಾಡಿಸಿ ಗಮನ ಸೆಳೆದಿದ್ದಾರೆ.

ಚುನಾಯಿತ ಸದಸ್ಯರು ಇಲ್ಲದ ಕಾರಣ ಬಂಟ್ವಾಳ ನಗರಸಭೆ ಸದ್ಯ ಆಡಳಿತಾಧಿಕಾರಿಯ ಆಡಳಿತದಲ್ಲಿದೆ. ಮುಂಗಾರು ಆರಂಭವಾಗಿ ಸುಮಾರು ಎರಡು ತಿಂಗಳು ಕಳೆದರೂ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಿ. ರಾಮಚಂದ್ರ ರಾವ್ ಅವರು ಸ್ವಂತ ಹಣ ಖರ್ಚು ಮಾಡಿ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡಿದ್ದಾರೆ.
ಮುಂಗಾರು ಹಿನ್ನೆಲೆಯಲ್ಲಿ ಬಂಟ್ವಾಳ ನಗರಸಭೆಯ ಕೈಕುಂಜೆ 14ನೇ ವಾರ್ಡ್ ವ್ಯಾಪ್ತಿಯ ಕೈಕುಂಜೆ ಪೂರ್ವ ಪ್ರದೇಶಕ್ಕೆ ರೈಲು ನಿಲ್ದಾಣದಿಂದ ತಿರುಗುವ ರಸ್ತೆಯ ಬದಿಯ ಚರಂಡಿಯಲ್ಲಿ ಭಾರೀ ಪ್ರಮಾಣದ ಮಣ್ಣು ಸಂಗ್ರಹವಾಗಿತ್ತು. ಇದರಿಂದ ಮಳೆನೀರು ಸರಾಗವಾಗಿ ಹರಿಯದೆ, ಕೆಸರು ನೀರು ರಸ್ತೆಗೆ ಹರಿದುಬರಲು ಆರಂಭಿಸಿತ್ತು.
ಈ ಸಮಸ್ಯೆ ಕುರಿತು ಸ್ಥಳೀಯ ನಿವಾಸಿಗಳೊಂದಿಗೆ ಸೇರಿ ರಾವ್ ಅವರು ನಗರಸಭೆಗೆ ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದ್ದರು. ಆದರೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ತಾವೇ ಸಮಸ್ಯೆ ಪರಿಹರಿಸಲು ಮುಂದಾದರು.
ಸ್ವಂತ ಖರ್ಚಿನಲ್ಲಿ ಜೆಸಿಬಿ ಹಾಗೂ ಕಾರ್ಮಿಕರನ್ನು ಬಳಸಿ ಚರಂಡಿಯಲ್ಲಿದ್ದ ಹೂಳು ಮತ್ತು ಮಣ್ಣನ್ನು ತೆರವುಗೊಳಿಸುವಂತೆ ಮಾಡಿಸಿದರು. ಅವರ ಈ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.