ಕಾರ್ಕಳ, ಸೆ. 02 (DaijiworldNews/AA): ಪರಶುರಾಮ ಥೀಮ್ ಪಾರ್ಕ್ ವಿವಾದಕ್ಕೆ ಸಂಬಂಧಿಸಿದಂತೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಹಮ್ಮಿಕೊಂಡಿದ್ದ ಪೋಸ್ಟರ್ ಅಭಿಯಾನಕ್ಕೆ ಪೊಲೀಸರು ತಡೆ ನೀಡಿದ್ದು, 20ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.



ಅಭಿಯಾನ ಆರಂಭಿಸುವ ಮುನ್ನವೇ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶುಭದ ರಾವ್ ಸೇರಿದಂತೆ 20ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪರಶುರಾಮ ಥೀಮ್ ಪಾರ್ಕ್ಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪೋಸ್ಟರ್ ಅಭಿಯಾನ ಘೋಷಿಸಿತ್ತು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕಿ ಶುಭದ ರಾವ್, ಸುನಿಲ್ ಕುಮಾರ್ ಅವರು ನಕಲಿ ಪರಶುರಾಮ ಪ್ರತಿಮೆ ಸ್ಥಾಪಿಸಿದ್ದಾರೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ತಳಮಟ್ಟದಿಂದಲೇ ಪೋಸ್ಟರ್ ಅಭಿಯಾನ ಆರಂಭಿಸಲಾಗುವುದು ಹಾಗೂ ಮೊದಲಿಗೆ ಶಾಸಕರ ನಿವಾಸಕ್ಕೆ ಪೋಸ್ಟರ್ ಅಂಟಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಘೋಷಿಸಿದ್ದರು.
ಬುಧವಾರ ಕಾರ್ಕಳ ಕಾಂಗ್ರೆಸ್ ಕಚೇರಿಯಿಂದ ಹೊರಟಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಸರ್ವಜ್ಞ ವೃತ್ತದ ಬಳಿ ಪೊಲೀಸರು ತಡೆದರುದೀ ವೇಳೆ ಶುಭದ ರಾವ್ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪೊಲೀಸರ ಕ್ರಮದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಶಾಸಕ ಸುನಿಲ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವುದನ್ನು ತಡೆಯಲು ಪೊಲೀಸರು ಪ್ರತಿಭಟನಾಕಾರರನ್ನು ತಕ್ಷಣ ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಸ್ಥಳಾಂತರಿಸಿದರು.
ಕಾಂಗ್ರೆಸ್ನ ಪೋಸ್ಟರ್ ಅಭಿಯಾನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸುನಿಲ್ ಕುಮಾರ್ ಅವರ ಬೆಂಬಲಕ್ಕೆ 200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಶಾಸಕರ ನಿವಾಸ ಹಾಗೂ ಕಚೇರಿ ಸಮೀಪ ಜಮಾಯಿಸಿದರು.
ಸುಮಾರು 25 ಕಾಂಗ್ರೆಸ್ ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರೆ, ಅವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಶಾಸಕರ ಬೆಂಬಲಕ್ಕೆ ಸೇರಿ ಶುಭದ ರಾವ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಮುಟ್ಲುಪಾಡಿ ಸತೀಶ್ ಶೆಟ್ಟಿ, "ಸುನಿಲ್ ಕುಮಾರ್ ಅವರ ನಿವಾಸದಲ್ಲಿ ಪೋಸ್ಟರ್ ಅಭಿಯಾನ ನಡೆಸಲು ಮುಂದಾಗಿದ್ದ ಕಾಂಗ್ರೆಸ್ ನಾಯಕರು ಹೇಡಿಗಳು. ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಸುನಿಲ್ ಕುಮಾರ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಹಾಗೂ ಈ ಪ್ರಕರಣದಲ್ಲಿ ಶಾಸಕರು ಆರೋಪಿಯೂ ಅಲ್ಲ" ಎಂದು ಹೇಳಿದರು.
"ಕಾಂಗ್ರೆಸ್ ನಾಯಕರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಇಂತಹ ಘಟನೆಗಳು ಮತ್ತೆ ನಡೆದರೆ ಬಿಜೆಪಿ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ" ಎಂದು ಎಚ್ಚರಿಕೆ ನೀಡಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಮಾತನಾಡಿ, ಶಾಸಕರ ನಿವಾಸ ಹಾಗೂ ಕಚೇರಿಯನ್ನು ಗುರಿಯಾಗಿಸುವ ಬದಲು ಸಾಮಾನ್ಯ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಪೋಸ್ಟರ್ ಅಂಟಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸವಾಲು ಹಾಕಿದರು. ಅಂತಹ ಸಂದರ್ಭದಲ್ಲಿ ಸೂಕ್ತ ಉತ್ತರ ನೀಡಲಾಗುವುದು ಎಂದು ಅವರು ಹೇಳಿದರು.
ಕಾಂಗ್ರೆಸ್ನ ಪೋಸ್ಟರ್ ಅಭಿಯಾನದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು. ಸರ್ವಜ್ಞ ವೃತ್ತದ ಹೋಟೆಲ್ ಜೈನ್ ಸಮೀಪ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಶಾಸಕರ ನಿವಾಸ ಹಾಗೂ ಕಚೇರಿಗೂ ಭದ್ರತೆ ಒದಗಿಸಲಾಗಿತ್ತು.
ಕಾರ್ಕಳ ಉಪವಿಭಾಗದ ಎಎಸ್ಪಿ ಇಶಿತಾ ಗುಪ್ತಾ, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ, ಕಾರ್ಕಳ ಗ್ರಾಮಾಂತರ ಠಾಣೆಯ ಎಸ್ಐ ಪ್ರಸನ್ನ ಎಂ.ಎಸ್., ಕಾರ್ಕಳ ನಗರ ಠಾಣೆಯ ಎಸ್ಐ ಶಿವಕುಮಾರ್, ಕಾಪು ಎಸ್ಐ ತೇಜಸ್ವಿ ಹಾಗೂ ಪಡುಬಿದ್ರಿ ಎಸ್ಐ ಶಕ್ತಿವೇಲ್ ಅವರು ಭದ್ರತಾ ವ್ಯವಸ್ಥೆಯ ನೇತೃತ್ವ ವಹಿಸಿದ್ದರು.
ಇದೇ ವೇಳೆ ಕಾಂಗ್ರೆಸ್ನ ಪೋಸ್ಟರ್ ಅಭಿಯಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾರ್ಕಳ ಎಎಸ್ಪಿ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.