ಮಂಗಳೂರು, ಆ. 30 (DaijiworldNews/AA): ಭಾರತೀಯ ಕಥೋಲಿಕ ಯುವ ಸಂಚಲನ, ಫರ್ಲಾ ಇದರ ವತಿಯಿಂದ, ಕಥೋಲಿಕ್ ಸಭಾ ಫರ್ಲಾ ಘಟಕ, ಸಾಮಾಜಿಕ ಅಭಿವೃದ್ಧಿ ಆಯೋಗ, ಸಾಮಾನ್ಯ ವಿಶ್ವಾಸಿಗಳ ಆಯೋಗ, ಪರಿಸರ ಆಯೋಗ ಹಾಗೂ ಕಾರ್ಮಿಕ ಆಯೋಗದ ಸಹಭಾಗಿತ್ವದಲ್ಲಿ ಆ. 30 ರಂದು ಸ್ವಚ್ಛತಾ ಆಂದೋಲನವನ್ನು ಹಳೇಗೇಟಿನಿಂದ ಮಣಿಹಳ್ಳದವರೆಗೆ ಹಮ್ಮಿಕೊಳ್ಳಲಾಯಿತು.

ವೆಲಂಕಣಿ ಮಾತೆ ದೇವಾಲಯದ ಧರ್ಮಮಗುರುಗಳೂ, ಯುವಸಂಚಲನದ ನಿರ್ದೇಶಕರಾದ ವಂ|ಫಾ| ಮಾರ್ಕ್ ಅರುಣ್ ಡಿಸೋಜಾರವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, "ಸ್ವಚ್ಛತೆ ಒಂದು ದಿನದ ಕೆಲಸವಲ್ಲ ಇದೊಂದು ನಿರಂತರ ನಡೆಸುವ ಕರ್ತವ್ಯ. ಸೂಕ್ತ ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮುಂದಿನ ಪೀಳಿಗೆಗೆ ಉತ್ತಮ, ಸ್ವಚ್ಛ ಪರಿಸರವನ್ನು ಉಡುಗೊರೆಯಾಗಿ ನೀಡುವುದು ನಮ್ಮ ಹೊಣೆ" ಎಂದು ಹೇಳಿದರು.
ಬಳಿಕ ಮಾತನಾಡಿದ ನಾವೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಬರ್ಟ್ ಫ್ರಾನ್ಸಿಸ್ ಫೆರ್ನಾಂಡಿಸ್ ಅವರು, "ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಪರಿಸರದ ಸ್ವಚ್ಛತೆಯನ್ನು ಕಾಪಾಡಬೇಕು. ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಮನೆಯಿಂದ ಪ್ರಾರಂಭವಾಗಿ, ನೆರೆಹೊರೆಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮುಂದುವರೆಯಬೇಕು" ಎಂದು ತಿಳಿಸಿದರು.
ಭಾರತೀಯ ಯುವ ಸಂಚಲನದ ಅಧ್ಯಕ್ಷರಾದ ಕೇತನ್ ರೊಡ್ರಿಗಸ್, ಕಥೋಲಿಕ್ ಸಭಾ ಫರ್ಲಾ ಘಟಕದ ಅಧ್ಯಕ್ಷರಾದ ನವೀನ್ ಮೆನೇಜಸ್, ಕಾರ್ಮಿಕ ಆಯೋಗದ ಸಂಚಾಲಕಿ ಆಲಿಸ್ ಸಿಕ್ವೇರಾ, ಸಾಮಾಜಿಕ ಅಭಿವೃದ್ಧಿ ಆಯೋಗದ ಸಂಚಾಲಕಿ ರೂಪ ಡಿಕೋಸ್ಟ, ಪರಿಸರ ಆಯೋಗದ ಸಂಚಾಲಕರಾದ ನೆವಿಲ್ ಡಿಸೋಜಾ ಹಾಗೂ ಸಾಮಾನ್ಯ ವಿಶ್ವಾಸಿಗಳ ಆಯೋಗದ ಸಂಚಾಲಕಿ ಜೋಯ್ಸ್ ಡಿಸೋಜಾರವರು ಈ ಆಂದೋಲನದಲ್ಲಿ ಉಪಸ್ಥಿತರಿದ್ದರು.
ಫರ್ಲಾ ಚರ್ಚಿನ ವಿವಿಧ ಆಯೋಗಗಳ ಪ್ರತಿನಿಧಿಗಳು , ಆಟೋ ಚಾಲಕರು, ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಆಗಮಿಸಿ, ಪರಿಸರದ ಮೇಲೆ ತಮಗಿರುವ ಕಾಳಜಿಯನ್ನು ವ್ಯಕ್ತಪಡಿಸಿದರು.