ಮಂಗಳೂರು/ಉಡುಪಿ, ಆ. 30 (DaijiworldNews/AA): ಕರಾವಳಿ ಭಾಗದಲ್ಲಿ ಶನಿವಾರ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ, ಸುಳ್ಯ, ಕಡಬ, ಉಳ್ಳಾಲ ಹಾಗೂ ಸುಬ್ರಹ್ಮಣ್ಯ ಸೇರಿದಂತೆ ವಿವಿಧೆಡೆ ಆಗಾಗ ಮಳೆಯಾಗಿದೆ.

ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲೂ ಸಾಧಾರಣ ಮಳೆಯಾಗಿದೆ. ಬೆಳಗ್ಗೆ ಕೆಲವೆಡೆ ತುಂತುರು ಮಳೆಯಾದ ಬಳಿಕ, ನಂತರ ಬಿಸಿಲಿನ ವಾತಾವರಣ ಕಂಡುಬಂದಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯ ಪ್ರಕಾರ, ಮುಂದಿನ ಎರಡು ದಿನಗಳಲ್ಲೂ ಕರಾವಳಿ ಭಾಗದ ಕೆಲವು ಪ್ರದೇಶಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಸುಬ್ರಹ್ಮಣ್ಯ, ಸಿದ್ಧಾಪುರದಲ್ಲಿ ಗರಿಷ್ಠ ಮಳೆ
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಸುಬ್ರಹ್ಮಣ್ಯ ಹಾಗೂ ಸಿದ್ಧಾಪುರದಲ್ಲಿ ತಲಾ 5 ಸೆಂ.ಮೀ. ಮಳೆ ದಾಖಲಾಗಿದೆ. ಇದು ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾಗಿದೆ.
ಇದೇ ಅವಧಿಯಲ್ಲಿ ಕರ್ನಾಟಕದ ವಿವಿಧೆಡೆ ದಾಖಲಾಗಿರುವ ಮಳೆ ಪ್ರಮಾಣ ಹೀಗಿದೆ:
4 ಸೆಂ.ಮೀ.: ಬಂಟ್ವಾಳ, ಆಗುಂಬೆ
3 ಸೆಂ.ಮೀ.: ಗೇರುಸೊಪ್ಪ, ಧರ್ಮಸ್ಥಳ, ಕೊಲ್ಲೂರು, ಮಂಕಿ, ಭಾಗಮಂಡಲ
2 ಸೆಂ.ಮೀ.: ಸುಳ್ಯ, ಉಡುಪಿ, ಕುಮಟಾ, ಮಾಣಿ, ಕೋಟ, ಶೃಂಗೇರಿ, ತಾಳಗುಪ್ಪ
1 ಸೆಂ.ಮೀ.: ಬಜ್ಪೆ, ಅಂಕೋಲಾ, ನೀಲ್ಕುಂದ, ಗೋಕರ್ಣ, ಬೆಳ್ತಂಗಡಿ, ಪುತ್ತೂರು, ಬ್ರಹ್ಮಾವರ, ಶಿರಸಿ, ಕಾರ್ಕಳ, ಬೆಳ್ಳೂರು, ನಾಪೋಕ್ಲು, ತ್ಯಾಗರ್ತಿ, ನಂಜನಗೂಡು