ಕಾಸರಗೋಡು, ಆ. 29 (DaijiworldNews/AK):ಗಣೇಶ ಚತುರ್ಥಿ ಹಬ್ಬದ ಆಚರಣೆಯ ಅಂಗವಾಗಿ ಸೆಪ್ಟೆಂಬರ್ 14ರ ಕಾಸರಗೋಡು ಕಂದಾಯ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಪ್ರಾದೇಶಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಆದೇಶ ಹೊರಡಿಸಿದ್ದಾರೆ.

ಇನ್ನು ಮುಂಚಿತವಾಗಿ ನಿಗದಿಪಡಿಸಲಾದ ವಿಶ್ವವಿದ್ಯಾಲಯ ಪರೀಕ್ಷೆಗಳು, ಶಾಲಾ ಬೋರ್ಡ್ ಪರೀಕ್ಷೆಗಳು ಮತ್ತು ಇತರ ಸಾರ್ವಜನಿಕ ನೇಮಕಾತಿ ಪರೀಕ್ಷೆಗಳಿಗೆ ಈ ರಜೆ ಅನ್ವಯಿಸುವುದಿಲ್ಲ. ಈ ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿವೆ.
ಅಗತ್ಯ ಸೇವೆಗಳು, ಸರ್ಕಾರಿ ಖಜಾನೆಗಳು ಹಾಗೂ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ಕಾರ್ಯನಿರ್ವಹಿಸುವ ವಾಣಿಜ್ಯ ಬ್ಯಾಂಕಿಂಗ್ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.