ಮಂಗಳೂರು, ಆ. 28 (DaijiworldNews/AA): ಸೆಪ್ಟೆಂಬರ್ 8ರಂದು ಮರಿಯಮ್ಮನ ಜನ್ಮೋತ್ಸವ ಹಿನ್ನೆಲೆ ಸರ್ಕಾರಿ ರಜೆ ಘೋಷಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರಿಗೆ ಮನವಿ ಸಲ್ಲಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕ್ರೈಸ್ತ ಸಮುದಾಯವು ಸೆಪ್ಟೆಂಬರ್ 8ರಂದು ಪವಿತ್ರ ಕನ್ಯಾಮರಿಯಮ್ಮನ ಜನ್ಮೋತ್ಸವವನ್ನು ಅತ್ಯಂತ ಭಕ್ತಿಭಾವದಿಂದ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದೆ. ಹೀಗಾಗಿ ಸೆಪ್ಟೆಂಬರ್ 8ರಂದು ಮರಿಯಮ್ಮನ ಜನ್ಮೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ರಜೆ ಘೋಷಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಥನ್ ತಾವ್ರೊ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕನ್ಯಾಮರಿಯಮ್ಮನ ಜನ್ಮೋತ್ಸವವು ಮಂಗಳೂರಿನ ಕ್ಯಾಥೋಲಿಕ್ ಸಮುದಾಯದ ಧಾರ್ಮಿಕ ನಂಬಿಕೆ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದು ಬಂದಿರುವ ಈ ಆಚರಣೆಯಲ್ಲಿ ಕುಟುಂಬಗಳು, ಚರ್ಚ್ಗಳು ಹಾಗೂ ಸಮುದಾಯದವರು ಒಟ್ಟಾಗಿ ಭಾಗವಹಿಸುತ್ತಾರೆ. ಮಂಗಳೂರಿನ ವಿಶಿಷ್ಟ ಸಂಸ್ಕೃತಿ ಮತ್ತು ಸೌಹಾರ್ದತೆಯ ಪ್ರತೀಕವಾಗಿಯೂ ಈ ಹಬ್ಬವನ್ನು ಕಾಣಬಹುದು.
ಈ ಬೇಡಿಕೆಯನ್ನು ಪರಿಗಣಿಸಿ, ಮಂಗಳೂರಿನ ಕ್ಯಾಥೋಲಿಕ್ ಸಮುದಾಯದ ಧಾರ್ಮಿಕ ಭಾವನೆ, ಸಂಸ್ಕೃತಿ ಮತ್ತು ಬಹುಕಾಲದ ಪರಂಪರೆಗೆ ಗೌರವ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಲ್ಲಿ ವಿನಂತಿ ಮಾಡಲಾಗಿದೆ.