ಕುಂದಾಪುರ, ಆ. 26 (DaijiworldNews/AA): ಮೀನುಗಾರಿಕೆಯಲ್ಲಿ ತೊಡಗಿದ್ದ ಪರ್ಸ್ ಸೀನ್ ಮೀನುಗಾರಿಕಾ ಬೋಟ್ನಲ್ಲಿ ಬಿರುಕು ಕಾಣಿಸಿಕೊಂಡು ನೀರು ಒಳನುಗ್ಗಿ ಮುಳುಗಲು ಆರಂಭಿಸಿದ್ದು, ಈ ವೇಳೆ ಬೋಟ್ನಲ್ಲಿದ್ದ 30 ಮೀನುಗಾರರನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿ ಕರಾವಳಿ ಸಮೀಪ ಸಂಭವಿಸಿದೆ.



ಗಂಗೊಳ್ಳಿಯಿಂದ ಸುಮಾರು ಮೂರು ನಾಟಿಕಲ್ ಮೈಲು ದೂರದಲ್ಲಿ ಬೋಟ್ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಬಲವಾದ ಅಲೆಗಳ ಅಬ್ಬರಕ್ಕೆ ಬೋಟ್ಗೆ ಹಾನಿಯಾಗಿದ್ದು, ಬಳಿಕ ನೀರು ಒಳನುಗ್ಗಲು ಆರಂಭಿಸಿದೆ. ಕ್ರಮೇಣ ದೋಣಿ ಮುಳುಗಲು ಆರಂಭಿಸಿದೆ.
ಘಟನೆ ಕುರಿತು ಮಾಹಿತಿ ದೊರೆಯುತ್ತಿದ್ದಂತೆ ಕರಾವಳಿ ಭದ್ರತಾ ಪೊಲೀಸರು ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕರಾವಳಿ ಮೀಸಲು ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಕೆ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ರಕ್ಷಣಾ ತಂಡವು ದೋಣಿಯಲ್ಲಿದ್ದ ಎಲ್ಲಾ 30 ಮೀನುಗಾರರನ್ನು ಸುರಕ್ಷಿತವಾಗಿ ಹೊರತೆಗೆದು ದಡಕ್ಕೆ ಕರೆತಂದಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.