ಮಂಗಳೂರು, ಆ. 26 (DaijiworldNews/AA): ಸಹೋದರಿಯ ತಲೆಗೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ, ಆಕೆಯ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 10,000 ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿರುತ್ತದೆ.

ಕಂಬಳಪದವು ನಿವಾಸಿ ಆರೋಪಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾ, 2019ರ ಅಕ್ಟೋಬರ್ 8 ರಂದು ಮಧ್ಯಾಹ್ನ 12 ಗಂಟೆಗೆ ಆತನ ತಂಗಿ ಫಿಯೋನಾ ಸ್ವೀಡಲ್ ಕುಟಿನ್ಹಾ ಎಂಬವಳೊಂದಿಗೆ ಮೊಬೈಲ್ ನ್ನು ಉಪಯೋಗಿಸಲು ಕೊಡುವಂತೆ ಕೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮೊಬೈಲ್ ವಿಚಾರವಾಗಿ ವಿವಾದ ನಡೆದಿದೆ. ಇದರಿಂದ ಕೋಪಗೊಂಡ ಆರೋಪಿಯು ಸುತ್ತಿಗೆಯಿಂದ ಆಕೆಯ ತಲೆಗೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಮನೆಯ ಹಿಂಭಾಗದ ಪೊದೆಯಲ್ಲಿ ಬಚ್ಚಿಟ್ಟಿರುತ್ತಾನೆ.
ಮೃತ ಸ್ವೀಡಲ್ ಕುಟಿನ್ಹಾ ರವರ ತಂದೆ ಪ್ರಾನ್ಸಿಸ್ ಕುಟಿನ್ಹಾ ಅವರು ಮಗಳು ಕಾಣೆಯಾಗಿರುವ ಬಗ್ಗೆ ದೂರು ಠಾಣೆಯಲ್ಲಿ ಮೊ.ನಂ 67/2019 ಕಲಂ 363 ಐಪಿಸಿಯಂತೆ ಪ್ರಕರಣ ದಾಖಲಿಸಿರುತ್ತಾರೆ. ನಂತರ ಈ ಪ್ರಕರಣವನ್ನು ತನಿಖೆ ನಡೆಸಿದ ಎಸಿಪಿ ದಕ್ಷಿಣ, ಟಿ. ಕೋದಂಡ ರಾಮ್ ಅವರು ಮಾನ್ಯ ನ್ಯಾಯಾಲಯಕ್ಕೆ ಕಲಂ 302, 201 ಐಪಿಸಿ ಪ್ರಕಾರ 2020ರ ಜನವರಿ 10 ರಂದು ದೋಷಾರೋಪಣಾ ಪಟ್ಟಿ ಸಲ್ಲಿಸಿರುತ್ತಾರೆ.
ಆ.24 ರಂದು ಮಾನ್ಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗಿದ್ದು, ಆರೋಪಿ ಸ್ಯಾಮ್ಸನ್ ಪ್ರಾನ್ಸಿಸ್ ಕುಟಿನ್ಹಾಗೆ ಕಲಂ 304 (ii) ಐಪಿಸಿಗೆ 4 ವರ್ಷ ಸಜೆ ಮತ್ತು 10,000ರೂ. ದಂಡ, ಕಲಂ 201 ಐಪಿಸಿ ಗೆ 1 ವರ್ಷ ಸಜೆ ಮತ್ತು 1,000ರೂ. ದಂಡವನ್ನು ವಿಧಿಸಿರುತ್ತದೆ. ಅಭಿಯೋಜನ ಪರವಾಗಿ ಜ್ಯೋತಿ ಪ್ರಮೋದ ನಾಯಕ್ ರವರು ವಾದಿಸಿರುತ್ತಾರೆ.