ಬಂಟ್ವಾಳ, ಆ. 26(DaijiworldNews/AK):ಬಿ.ಸಿ.ರೋಡು–ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಂಡಿ ಎಂಬಲ್ಲಿ ರಸ್ತೆ ಬದಿಯ ತೋಡಿನಲ್ಲಿ ಪ್ರಾಣಿಗಳ ತ್ಯಾಜ್ಯ ಪತ್ತೆಯಾಗಿದ್ದು, ಈ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




ಯಾವುದೋ ಪ್ರಾಣಿಯನ್ನು ವಧೆ ಮಾಡಿದ ಬಳಿಕ ಅದರ ಕರುಳು ಸೇರಿದಂತೆ ಇತರ ತ್ಯಾಜ್ಯ ಭಾಗಗಳನ್ನು ತಂದು ರಸ್ತೆ ಬದಿಯ ತೋಡಿಗೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸ್ಥಳೀಯರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಡಗುಂಡಿಯಲ್ಲಿ ಪತ್ತೆಯಾಗಿರುವ ತ್ಯಾಜ್ಯ ವಸ್ತುಗಳ ಬಗ್ಗೆ ಅನುಮಾನಗಳಿದ್ದು, ಪೊಲೀಸರು ಪರಿಶೀಲನೆ ನಡೆಸಿ ಅಗತ್ಯವಿದ್ದಲ್ಲಿ ವೈದ್ಯಕೀಯ ಅಥವಾ ವೈಜ್ಞಾನಿಕ ಪರೀಕ್ಷೆಯ ಮೂಲಕ ಅವು ಯಾವ ಪ್ರಾಣಿಯ ಅವಶೇಷಗಳು ಎಂಬುದನ್ನು ಖಚಿತಪಡಿಸಬೇಕು ಎಂದು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ನಾವೂರು ಒತ್ತಾಯಿಸಿದ್ದಾರೆ.
ಅಕ್ರಮವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಗಳಿಂದ ಪ್ರಾಣಿಗಳ ತ್ಯಾಜ್ಯವನ್ನು ತಂದು ಇಲ್ಲಿ ಎಸೆದಿರಬಹುದೆಂಬ ಶಂಕೆಯೂ ಇದೆ. ಈ ಕುರಿತು ಈಗಾಗಲೇ ಬೀಟ್ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ತ್ಯಾಜ್ಯವನ್ನು ಎಸೆದಿರುವ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಪತ್ತೆಯಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.