ಉಡುಪಿ, ಆ. 25 (DaijiworldNews/AA): ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಪಡುಕೆರೆ ದಕ್ಕೆಯಲ್ಲಿ ಲಂಗರು ಹಾಕಲಾಗಿದ್ದ ಬೋಟ್ನಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಮೀನುಗಾರ ಕಾರ್ಮಿಕನೋರ್ವನನ್ನು ಕೊಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಮಂಗಳವಾರ ಮಲ್ಪೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಅಭಿಷೇಕ್ (24) ಮೃತ ಮೀನುಗಾರ ಕಾರ್ಮಿಕ. ಮೀನುಗಾರ ಕಾರ್ಮಿಕ ಗೋವಿಂದ ಬಂಧಿತ ಆರೋಪಿ.
ಆಗಸ್ಟ್ 24ರಂದು ರಾತ್ರಿ ಬೋಟ್ನಲ್ಲಿ ಗೋವಿಂದ ಹಾಗೂ ಅಭಿಷೇಕ್ ನಡುವೆ ತೀವ್ರ ಗಲಾಟೆ ನಡೆದಿದೆ. ಜಗಳದ ಮುಂದುವರಿದ ಭಾಗವಾಗಿ, ಆಗಸ್ಟ್ 25ರಂದು ಬೆಳಗ್ಗಿನ ಜಾವ ಗೋವಿಂದ ಅಭಿಷೇಕ್ನನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಮಲ್ಪೆ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕರಾದ ಅನೀಲ್ ಕುಮಾರ್ ಡಿ. ಹಾಗೂ ಸಿಬ್ಬಂದಿಗಳಾದ ಹೆಚ್.ಸಿ. ಆದರ್ಶ ಮತ್ತು ಪಿಸಿ ಕುಬೇರ ಅವರು ಆರೋಪಿಯ ಪತ್ತೆಗಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಮುಂಬೈ ಅಥವಾ ಹೈದರಾಬಾದ್ಗೆ ಪರಾರಿಯಾಗಲು ಉಡುಪಿ ರೈಲ್ವೆ ನಿಲ್ದಾಣದತ್ತ ತೆರಳುತ್ತಿದ್ದ ಆರೋಪಿ ಗೋವಿಂದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಗೋವಿಂದ ಕಳೆದ ಸುಮಾರು 15 ವರ್ಷಗಳಿಂದ ಮನೆಗೆ ಹೋಗದೆ ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧೆಡೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/2026ರಂತೆ BNS ಸೆಕ್ಷನ್ 103 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.