ಮೂಡುಬಿದಿರೆ, ಆ. 23 (DaijiworldNews/TA): ಛಾಯಾಗ್ರಹಣ ವೃತ್ತಿಯಲ್ಲಿ ಕಲಾತ್ಮಕತೆ, ಹೊಸತನ ಹಾಗೂ ವಿಶೇಷತೆಯನ್ನು ಮೂಡಿಸುವ ಉತ್ಸಾಹದ ಜತೆಗೆ ಪಬ್ಲಿಸಿಟಿಯೂ ಅಗತ್ಯ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಮಾನವೀಯತೆಯನ್ನು ಮರೆಯದೆ ಮುನ್ನಡೆಯಬೇಕು ಎಂದು ದೈಜಿವರ್ಲ್ಡ್ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಹೇಳಿದರು.








ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ಮೂಡುಬಿದಿರೆ ವಲಯದ ವತಿಯಿಂದ ಬುಧವಾರ ಕಲ್ಪವೃಕ್ಷ ಸಭಾಭವನದಲ್ಲಿ ಆಯೋಜಿಸಿದ್ದ ‘ಬಾಂಧವ್ಯ–2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಛಾಯಾಗ್ರಾಹಕ ಕೆವಿನ್ ಕಾರ್ಟರ್ ಅವರ ಪ್ರಸಿದ್ಧ ಛಾಯಾಚಿತ್ರವನ್ನು ಉಲ್ಲೇಖಿಸಿದ ವಾಲ್ಟರ್ ನಂದಳಿಕೆ, ಸುಡಾನ್ನ ಭೀಕರ ಬರಗಾಲದ ಸಂದರ್ಭದಲ್ಲಿ ಆಹಾರಕ್ಕಾಗಿ ಪರದಾಡುತ್ತಿದ್ದ ಕೃಶ ಶರೀರದ ಮಗುವಿನ ಸಾವಿಗಾಗಿ ಕಾಯುತ್ತಿದ್ದ ಹದ್ದಿನ ಚಿತ್ರವನ್ನು ಕೆವಿನ್ ಕಾರ್ಟರ್ ಸೆರೆಹಿಡಿದಿದ್ದರು. ಈ ಚಿತ್ರ ಅವರಿಗೆ ವಿಶ್ವಮಟ್ಟದ ಖ್ಯಾತಿ ತಂದುಕೊಟ್ಟರೂ, ಬಳಿಕ ಮಗುವನ್ನು ರಕ್ಷಿಸದೆ ಹಿಂದಿರುಗಿದ್ದ ಬಗ್ಗೆ ಅವರಿಗೆ ತೀವ್ರ ಪಶ್ಚಾತ್ತಾಪವಾಯಿತು ಎಂದು ವಿವರಿಸಿದರು. “ಛಾಯಾಚಿತ್ರದ ಹಿಂದೆ ಇರುವ ಮಾನವೀಯತೆಯನ್ನು ಮರೆಯಬಾರದು. ವೃತ್ತಿ ಮತ್ತು ಕುಟುಂಬದ ಜತೆಗೆ ಛಾಯಾಗ್ರಾಹಕರು ತಮ್ಮ ಆರೋಗ್ಯಕ್ಕೂ ಆದ್ಯತೆ ನೀಡಬೇಕು” ಎಂದು ಅವರು ಸಲಹೆ ನೀಡಿದರು. ಪತ್ರಕರ್ತರ ಬೆಳವಣಿಗೆಯಲ್ಲಿ ಛಾಯಾಗ್ರಾಹಕರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಎಂದ ಅವರು, ಉತ್ತಮ ಛಾಯಾಚಿತ್ರಗಳು ಸುದ್ದಿಯ ಪರಿಣಾಮವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಹೇಳಿದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮೂಡುಬಿದಿರೆ ವಲಯದ ಅಧ್ಯಕ್ಷ ನಿತಿನ್ ಬೆಳುವಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಛಾಯಾಗ್ರಾಹಕರು ಬದಲಾಗುತ್ತಿರುವ ತಂತ್ರಜ್ಞಾನವನ್ನು ಗೌರವಿಸಿ, ಅದರೊಂದಿಗೆ ಹೆಜ್ಜೆ ಹಾಕುತ್ತಾ ವೃತ್ತಿಯಲ್ಲಿ ಬೆಳೆಯಬೇಕು. ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆಯಾಗಿರಬೇಕು ಎಂದರು. ಕುಪ್ಪೆಪದವಿನ ಕಲ್ಯಾಣಿ ಸ್ಟೂಡಿಯೋದ ಹಿರಿಯ ಛಾಯಾಗ್ರಾಹಕ ಗುಣಪಾಲ ಅವರಿಗೆ ‘ಛಾಯಾಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಛಾಯಾರತ್ನ ಪ್ರಶಸ್ತಿ ಪುರಸ್ಕೃತ ಬಿ. ಅಭಯಕುಮಾರ್, ವಿವಾಹಿತ ಸದಸ್ಯರು, ವೃತ್ತಿ ವಿಸ್ತರಣೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸದಸ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ರವಿ ಕೋಟ್ಯಾನ್ ಅವರಿಗೆ ಪ್ರಥಮ, ಮಿಥುನ್ ಪೂಜಾರಿ ಅವರಿಗೆ ದ್ವಿತೀಯ ಹಾಗೂ ನೆಲ್ಲಿಕಾರು ಪ್ರದೀಪ್ ಕುಮಾರ್ ಅವರಿಗೆ ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪರಿಸರದ ಮಹತ್ವದ ಕುರಿತು ಬೆಳುವಾಯಿ ಸಮ್ಮಿಲನ್ ಶೆಟ್ಟಿ ಉಪನ್ಯಾಸ ನೀಡಿದರು. ಸಸಿಗಳ ವಿತರಣೆ, ಹಳೆಯ ಕ್ಯಾಮರಾಗಳ ಪ್ರದರ್ಶನ ಹಾಗೂ ಛಾಯಾಗ್ರಾಹಕರು ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಛಾಯಾಗ್ರಾಹಕರ ಕುಟುಂಬದ ವಿದ್ಯಾರ್ಥಿ ಸುಯೋಗ್ ಅವರಿಗೆ ವಿದ್ಯಾರ್ಥಿವೇತನ ಹಾಗೂ ಚಿಕಿತ್ಸೆಗಾಗಿ ದಿನೇಶ್ ಅವರಿಗೆ ಆರ್ಥಿಕ ನೆರವು ನೀಡಲಾಯಿತು.
ಜಿಲ್ಲಾ ಉಪಾಧ್ಯಕ್ಷ ದೇವರಾಜ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಅಜಯ್ ಕುಮಾರ್ ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿ.ಎಸ್. ಕೋಟ್ಯಾನ್, ವಲಯ ಗೌರವಾಧ್ಯಕ್ಷ ಉದಯ್ ಕುಮಾರ್ ಭಟ್, ಉಪಾಧ್ಯಕ್ಷ ರಂಜಿತ್ ಕೋಟ್ಯಾನ್ ,ಕೋಶಾಧಿಕಾರಿ ಪದ್ಮನಾಭ ಮಿಜಾರ್ ಉಪಸ್ಥಿತರಿದ್ದರು. ಜಿಲ್ಲಾ ಕಟ್ಟಡ ಸಮಿತಿ ಸದಸ್ಯ ವಿಲ್ಫ್ರೆಡ್ ಮೆಂಡೋನ್ಸಾ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಲಯ ಕಾರ್ಯದರ್ಶಿ ನಮಿತ್ ವಂದಿಸಿದರು.ಸಂದೀಪ್ ಶೆಟ್ಟಿ ರಾಯಿ ಕಾರ್ಯಕ್ರಮ ನಿರೂಪಿಸಿದರು.