ಮೂಡುಬಿದಿರೆ, ಆ. 22 (DaijiworldNews/TA): ಉಡುಪಿಯ ಅಲೆವೂರಿನಲ್ಲಿ ರಾಸಾಯನಿಕ ಬಳಸಿ ಬಾಳೆಕಾಯಿಯನ್ನು ಹಣ್ಣಾಗಿಸುವ ಅಡ್ಡೆಗೆ ನಡೆದಿರುವ ದಾಳಿಯು, ಮೂಡುಬಿದಿರೆ ವಾರದ ಸಂತೆಯ ಮೇಲೂ ಪರಿಣಾಮ ಬೀರಿದಂತಿದೆ. ಈ ಸಂತೆಯಲ್ಲಿ ದೊಡ್ಡ ಮಟ್ಟದಲ್ಲಿ ಬಾಳೆಹಣ್ಣು ಮಾರಾಟ ಮಾಡುತ್ತಿದ್ದ ಎರಡು ಸ್ಥಳಗಳು (ಗಂಡಿ) ಖಾಲಿಯಾಗಿದ್ದವು.

ಪ್ರಮುಖ ಬಾಳೆಹಣ್ಣು ವ್ಯಾಪಾರಿಗಳು ಸಂತೆಯಲ್ಲಿ ಕಂಡುಬಂದಿಲ್ಲ. ಬೇರೆ ಕೆಲವು ಸಣ್ಣಪುಟ್ಟ ವ್ಯಾಪಾರಿಗಳು ಎಂದಿನಂತೆ ಬಾಳೆಹಣ್ಣು ಮಾರಾಟ ಮಾಡುತ್ತಿದ್ದರು. ವಿವಿಧೆಡೆಯ ಸಂತೆ ಗಳಲ್ಲಿ ಇದೇ ರೀತಿ ಕೃತಕವಾಗಿ ಮಾಗಿಸಿದ ಹಣ್ಣುಗಳನ್ನೇ ಮಾರಲಾಗುತ್ತಿದೆ ಎಂಬ ಆರೋಪವೂ ಇದ್ದು, ಇದನ್ನು ಈ ಖಾಲಿಯಾದ ಗಂಡಿಗಳು ಪುಷ್ಟೀಕರಿಸುತ್ತಿವೆ. ಈ ಬಗ್ಗೆ ಶುಕ್ರವಾರ ಮುಂಜಾನೆಯೇ ಮೂಡುಬಿದಿರೆ ತಾಲೂಕು ಪ್ರಭಾರ ಹೊಣೆ ಇರುವ ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಸುಜಯ್ ಭಂಡಾರಿ ಅವರ ಗಮನ ಸೆಳೆಯಲಾಗಿದ್ದು, ಪುರಸಭೆ ಆರೋಗ್ಯ ನಿರೀಕ್ಷಕರ ಜತೆಗೂಡಿ ಸಂತೆಯಲ್ಲಿ ಪರಿಶೀಲಿಸುವಂತೆ ಮೂಡುಬಿದಿರೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಖಾದರ್ ನದಾಫ್ಗೆ ಸೂಚಿಸಿದ್ದೇನೆ ಎಂದು ಭಂಡಾರಿ ತಿಳಿಸಿದ್ದಾರೆ.
ಆದರೆ ಶುಕ್ರವಾರ ಸಂಜೆ ಪುರಸಭೆ ಆರೋಗ್ಯ ನಿರೀಕ್ಷಕಿ ಶಶಿರೇಖಾ ಅವರಲ್ಲಿ ವಿಚಾರಿಸಿದಾಗ, ತನಗೆ ಯಾರೂ ಸೂಚನೆ ನೀಡಿಲ್ಲ ಎಂದು ತಿಳಿಸಿದರು. ಖಾದರ್ ನದಾಫ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಎರಡು ವರ್ಷಗಳ ಹಿಂದೆ ಮೂಡುಬಿದಿರೆ ತಾಲೂಕು ಕಚೇರಿಗೆ ಬಂದಿದ್ದ ಆಗಿನ ಜಿಲ್ಲಾಧಿಕಾರಿಯವರಿಗೆ ಸಾರ್ವಜನಿಕ ಹಿತಾಸಕ್ತಿಯಿಂದ ಆಹಾರ ಪದಾರ್ಥಗಳ ಕಲಬೆರಕೆ ಪತ್ತೆ ಹಚ್ಚಲು ಸರಕಾರಿ ಆಸ್ಪತ್ರೆಗಳಲ್ಲಿ, ಕನಿಷ್ಠ ತಾಲೂಕು ಮಟ್ಟದಲ್ಲಿ ಪ್ರಯೋಗಾಲಯ ಸ್ಥಾಪಿಸಬೇಕು ಎಂಬ ಮನವಿ ಸಲ್ಲಿಸಲಾಗಿತ್ತು. ಈಗ ಆ ಬೇಡಿಕೆಗೆ ಮರುಜೀವ ಸಿಕ್ಕಿದೆ.