ಕಾಸರಗೋಡು, ಜು. 19 (DaijiworldNews/AA): ಪೋಷಕರು ಮನೆ ಬಳಕೆಯ ಸಾಮಗ್ರಿಗಳನ್ನು ಖರೀದಿಸಲು ಮಾರುಕಟ್ಟೆಗೆ ತೆರಳಿದ್ದ ವೇಳೆ, 12 ವರ್ಷದ ಬಾಲಕನೋರ್ವ ಕಾರ್ಮಿಕರ ವಸತಿ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ದುರ್ಘಟನೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬೆದ್ರಂಪಳ್ಳದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಮೃತ ಬಾಲಕನನ್ನು ಶ್ರೀಹರಿ (12) ಎಂದು ಗುರುತಿಸಲಾಗಿದೆ.
ಮೃತ ಶ್ರೀಹರಿ ಬಣ್ಪುತ್ತಡ್ಕ ಎಯುಪಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾಗಿದ್ದು, ರಬ್ಬರ್ ತೋಟದಲ್ಲಿ ಟ್ಯಾಪಿಂಕ್ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಪ್ರಕಾಶನ್ ಮತ್ತು ಸುನಿತಾ ದಂಪತಿಯ ಪುತ್ರನಾಗಿದ್ದಾನೆ. ಮೂಲತಃ ಪತ್ತನಂತಿಟ್ಟ ಜಿಲ್ಲೆಯ ಅಡೂರ್ ನಿವಾಸಿಗಳಾದ ಈ ಕುಟುಂಬವು ಕಳೆದ ಕೆಲವು ಸಮಯದಿಂದ ಬೆದ್ರಂಪಳ್ಳದ ರಬ್ಬರ್ ತೋಟದ ಕಾರ್ಮಿಕರ ವಸತಿ ಗೃಹದಲ್ಲಿ ವಾಸಿಸುತ್ತಿತ್ತು.
ಭಾನುವಾರ ಮಧ್ಯಾಹ್ನ ಶ್ರೀಹರಿಯ ಪೋಷಕರು ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ತೆರಳಿದ್ದರು. ಬಳಿಕ ಮನೆಗೆ ಹಿಂದಿರುಗಿದಾಗ ಕ್ವಾರ್ಟರ್ಸ್ನ ಮುಂಭಾಗದ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ಹಲವು ಬಾರಿ ಕರೆದರೂ ಶ್ರೀಹರಿ ಬಾಗಿಲು ತೆರೆಯದೇ ಇದ್ದಾಗ ಆತಂಕಗೊಂಡ ಪೋಷಕರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದ್ದಾರೆ.
ಈ ವೇಳೆ ಕೊಠಡಿಯೊಂದರಲ್ಲಿ ಶ್ರೀಹರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬದಿಯಡ್ಕ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.