ಮಂಗಳೂರು, ಜು. 19(DaijiworldNews/TA): ನಗರದ ಹೊರವಲಯದ ಸರಿಪಳ್ಳ ಸಮೀಪದ ಕೋಲ್ಚಾರ್ ಬೆಟ್ಟದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಧೂಳು, ಶಬ್ದ ಮಾಲಿನ್ಯ ಹಾಗೂ ರಸ್ತೆ ಹಾನಿಯಿಂದ ಸ್ಥಳೀಯರ ಜೀವನ ದುಸ್ತರವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಹಲವು ವರ್ಷಗಳಿಂದ ಗಣಿಗಾರಿಕೆ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.






















ಸ್ಥಳೀಯರ ಪ್ರಕಾರ, ಕಲ್ಲು ಕ್ರಷರ್ಗಳು ಮತ್ತು ಭಾರೀ ಯಂತ್ರೋಪಕರಣಗಳ ನಿರಂತರ ಕಾರ್ಯಾಚರಣೆಯಿಂದ ಇಡೀ ಪ್ರದೇಶ ಧೂಳಿನಿಂದ ಆವರಿಸಿದ್ದು, ದಿನನಿತ್ಯದ ಬದುಕು ಸಂಕಷ್ಟಕರವಾಗಿದೆ. ಒಂದು ಕಾಲದಲ್ಲಿ ಹಸಿರು ಮತ್ತು ಶಾಂತ ವಾತಾವರಣ ಹೊಂದಿದ್ದ ಪ್ರದೇಶ ಇಂದು ಶಬ್ದ ಹಾಗೂ ವಾಯು ಮಾಲಿನ್ಯದ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. "ಒಮ್ಮೆ ಪ್ರಶಾಂತವಾಗಿದ್ದ ನಮ್ಮ ಗ್ರಾಮ ಈಗ ವಾಸಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ" ಎಂದು ಸ್ಥಳೀಯ ನಿವಾಸಿ ಜೆಸಿಂತಾ ಲೋಬೊ ಅಳಲು ತೋಡಿಕೊಂಡಿದ್ದಾರೆ.
ಹಾಳಾದ ರಸ್ತೆ, ಅಪಾಯದ ಸಂಚಾರ : ಗಣಿಗಾರಿಕೆಯಿಂದ ಕಲ್ಲು ಸಾಗಿಸುವ ಲಾರಿಗಳ ನಿರಂತರ ಸಂಚಾರದಿಂದ ಸರಿಪಳ್ಳ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಪ್ರತಿದಿನ ಗುಂಡಿಗಳ ನಡುವೆ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗುತ್ತಿದ್ದರೆ, ಬೇಸಿಗೆಯಲ್ಲಿ ಧೂಳಿನ ಕಾರ್ಮೋಮೋಡಗಳಿಂದ ಸಂಚಾರವೇ ದುಸ್ತರವಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆಮೋ
ಗಣಿಗಾರಿಕೆಯಿಂದ ಉಂಟಾಗುತ್ತಿರುವ ಧೂಳಿನ ಪರಿಣಾಮವಾಗಿ ಗ್ರಾಮದಲ್ಲಿ ಆಸ್ತಮಾ, ಉಸಿರಾಟದ ತೊಂದರೆ, ನಿರಂತರ ಕೆಮ್ಮು ಹಾಗೂ ಚರ್ಮದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ವಿಶೇಷವಾಗಿ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗಿದ್ದು, ಹಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ. ಗಣಿಗಾರಿಕೆ ಪ್ರದೇಶದಿಂದ ಹರಿದುಬರುವ ಕೆಸರು ನೀರು ಸಮೀಪದ ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿಯುಂಟು ಮಾಡುತ್ತಿದೆ ಎಂದು ರೈತರು ದೂರಿದ್ದಾರೆ. ಇದರಿಂದ ಕೃಷಿ ಉತ್ಪಾದನೆ ಕುಸಿದಿದ್ದು, ರೈತರ ಜೀವನೋಪಾಯಕ್ಕೂ ಹೊಡೆತ ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ಅಕ್ರಮ ಕಲ್ಲುಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸದಿದ್ದರೆ ವ್ಯಾಪಕ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಬೇಕು. ಅಕ್ರಮ ಗಣಿಗಾರಿಕೆ ದೃಢಪಟ್ಟರೆ ತಕ್ಷಣ ಸ್ಥಗಿತಗೊಳಿಸಿ, ಹಾನಿಗೊಳಗಾದ ರಸ್ತೆಗಳನ್ನು ದುರಸ್ತಿಗೊಳಿಸುವ ಜೊತೆಗೆ ಪರಿಸರ, ಸಾರ್ವಜನಿಕ ಆರೋಗ್ಯ ಮತ್ತು ಕೃಷಿ ಭೂಮಿಯನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ಕಾಲದಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಕೋಲ್ಚಾರ್ ಬೆಟ್ಟ ಇಂದು ಪರಿಸರ ಹಾನಿಯ ಸಂಕೇತವಾಗಿ ಪರಿಣಮಿಸಿದ್ದು, ಈ ಬಗ್ಗೆ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
- ವರದಿ : ನಯನಾ ಜೆ.ಸಿ