ವಿಟ್ಲ, ಜು. 18 (DaijiworldNews/TA): ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಉಕ್ಕುಡ ಬಳಿ ಜು.17ರಂದು ರಾತ್ರಿ ನಡೆದಿದೆ. ಗಾಯಾಳುಗಳನ್ನು ಪುತ್ತೂರು ಮೂಲದ ದಿನೇಶ್ ಮತ್ತು ಅಂಕಿತ್ ಎಂದು ಗುರುತಿಸಲಾಗಿದೆ. ವಿಟ್ಲ-ಅಡ್ಯನಡ್ಕ ರಸ್ತೆಯ ಉಕ್ಕುಡ ದರ್ಬೆ ಎಂಬಲ್ಲಿನ ಅಪಾಯಕಾರಿ ರಸ್ತೆ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ.

ಉಕ್ಕುಡ ಕಡೆಯಿಂದ ಕುದ್ದುಪದವು ಕಡೆಗೆ ಸಂಚರಿಸುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಟಿಪ್ಪರ್ ಲಾರಿಯ ಮುಂಭಾಗ ಜಖಂಗೊಂಡಿದ್ದು, ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಇಬ್ಬರೂ ಕ್ಯಾಬಿನ್ನಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಗಾಯಾಳುಗಳನ್ನು ಲಾರಿಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಅಪಘಾತಕ್ಕೀಡಾದ ಲಾರಿ ಉಪ್ಪಿನಂಗಡಿ ನಿವಾಸಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.