ಸುಳ್ಯ, ಜು. 18 (DaijiworldNews/TA): ಎರಡು ವಿಭಿನ್ನ ದೇಶಗಳು, ಬೇರೆಬೇರೆ ಸಂಸ್ಕೃತಿ, ಸಾವಿರಾರು ಕಿಲೋಮೀಟರ್ ದೂರ, ಆದರೆ ಶ್ರೀಕೃಷ್ಣನ ಮೇಲಿನ ಭಕ್ತಿ ಮತ್ತು ಭಾರತೀಯ ಸಂಸ್ಕೃತಿಯ ಮೇಲಿನ ಅಭಿಮಾನ ಇಬ್ಬರನ್ನೂ ಒಂದಾಗಿಸಿತು. ಅಮೆರಿಕದಲ್ಲಿ ಬೆಳೆದ ಯುವತಿ ಮತ್ತು ಸುಳ್ಯದ ಯುವಕನ ಅಪರೂಪದ ಪ್ರೇಮಕಥೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಸಾಂಪ್ರದಾಯಿಕ ಹಿಂದೂ ವಿವಾಹದ ಮೂಲಕ ಹೊಸ ಅಧ್ಯಾಯ ಆರಂಭಿಸಿದೆ.

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆಯ ಬಿ.ಕೆ. ಕೇಶವ ಅವರ ಪುತ್ರ ಸಾಯಿ ಸಂಕೇತ್, ಅಮೆರಿಕದ ಚಿಕಾಗೋ ನಗರದ ಡಾ. ಚಾರ್ಲ್ಸ್ ಅವರ ಪುತ್ರಿ ಶಾನೋನ್ ಅವರನ್ನು ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈದಿಕ ಮಂತ್ರೋಚ್ಚಾರಗಳೊಂದಿಗೆ ವಿವಾಹ ನೆರವೇರಿದ್ದು, ಈ ಅಪರೂಪದ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಮಡಿಕೇರಿ, ಮೈಸೂರು ಹಾಗೂ ಚೆನ್ನೈನ ಐಐಟಿಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಸಾಯಿ ಸಂಕೇತ್, ಬಳಿಕ ಪಶ್ಚಿಮ ಬಂಗಾಳದ ಮಾಯಾಪುರದಲ್ಲಿ ಅಗರಬತ್ತಿ ತಯಾರಿಕೆ ಮತ್ತು ರಫ್ತು ಉದ್ಯಮ ಆರಂಭಿಸಿದ್ದರು. ಇತ್ತ ಅಮೆರಿಕದಲ್ಲಿ ಶಿಕ್ಷಣ ಮುಗಿಸಿದ ಶಾನೋನ್, ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಜೀವನದತ್ತ ಆಕರ್ಷಿತರಾಗಿ ಭಾರತಕ್ಕೆ ಬಂದಿದ್ದರು. ಆನ್ಲೈನ್ ವೃತ್ತಿಯ ಜೊತೆಗೆ ಕೃಷ್ಣ ಭಕ್ತಿಯ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದ ಅವರು, ಆಗಾಗ ಸಾಯಿ ಸಂಕೇತ್ ಅವರ ಉದ್ಯಮಕ್ಕೆ ಭೇಟಿ ನೀಡುತ್ತಿದ್ದ ವೇಳೆ ಇಬ್ಬರಿಗೂ ಪರಿಚಯವಾಯಿತು.
ಮೊದಲಿಗೆ ಸ್ನೇಹವಾಗಿ ಆರಂಭವಾದ ಸಂಬಂಧ, ಕ್ರಮೇಣ ಪ್ರೀತಿಯಾಗಿ ಬೆಳೆಯಿತು. ದೇಶ, ಭಾಷೆ ಮತ್ತು ಸಂಸ್ಕೃತಿ ವಿಭಿನ್ನವಾಗಿದ್ದರೂ, ಕೃಷ್ಣ ಭಕ್ತಿ, ಆಧ್ಯಾತ್ಮಿಕ ಚಿಂತನೆ ಮತ್ತು ಜೀವನ ಮೌಲ್ಯಗಳು ಇಬ್ಬರನ್ನೂ ಮತ್ತಷ್ಟು ಹತ್ತಿರ ತಂದವು. ಸುಮಾರು ಎರಡು ವರ್ಷಗಳ ಕಾಲ ಪರಸ್ಪರ ಅರ್ಥಮಾಡಿಕೊಂಡ ಬಳಿಕ ಮದುವೆಯಾಗಲು ನಿರ್ಧರಿಸಿದರು. ಈ ಸಂಬಂಧಕ್ಕೆ ಎರಡೂ ಕುಟುಂಬಗಳಿಂದ ಸಂಪೂರ್ಣ ಬೆಂಬಲ ದೊರೆತಿದೆ.
ಆಷಾಢ ಮಾಸ ಆರಂಭಕ್ಕೂ ಮುನ್ನ ವಿವಾಹ ನೆರವೇರಿಸಬೇಕಿದ್ದ ಕಾರಣ, ಅಮೆರಿಕದಲ್ಲಿದ್ದ ಶಾನೋನ್ ಅವರ ಕುಟುಂಬದ ಎಲ್ಲ ಸದಸ್ಯರು ಮದುವೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ವಿವಾಹದ ವೇಳೆ ಶಾನೋನ್ ಸಾಂಪ್ರದಾಯಿಕ ಭಾರತೀಯ ವಧುವಿನ ಉಡುಗೆಯಲ್ಲಿ ಕಂಗೊಳಿಸಿ ಎಲ್ಲರ ಗಮನ ಸೆಳೆದರು. ಅವರಿಗೆ ಅಲ್ಪಸ್ವಲ್ಪ ಕನ್ನಡವೂ ತಿಳಿದಿದ್ದು, ಕರ್ನಾಟಕದ ಆಹಾರ ಪದ್ಧತಿ ಮತ್ತು ಸಂಸ್ಕೃತಿಯ ಮೇಲೂ ವಿಶೇಷ ಅಭಿಮಾನ ಹೊಂದಿದ್ದಾರೆ.
ವಿವಾಹದ ಬಳಿಕ ಮಾತನಾಡಿದ ಶಾನೋನ್, "ಭಾರತೀಯನನ್ನು ವಿವಾಹವಾಗಿರುವುದರಲ್ಲಿ ನನಗೆ ಹೆಮ್ಮೆ ಮತ್ತು ಸಂತೋಷವಿದೆ. ಇಲ್ಲಿನ ಸಂಸ್ಕೃತಿ ನನಗೆ ತುಂಬಾ ಇಷ್ಟವಾಗಿದೆ," ಎಂದು ಹೇಳಿದರು. ಇತ್ತ ಸಾಯಿ ಸಂಕೇತ್, "ನಮ್ಮ ವಿವಾಹಕ್ಕೆ ಎರಡೂ ಕುಟುಂಬಗಳ ಸಂಪೂರ್ಣ ಬೆಂಬಲ ಸಿಕ್ಕಿದೆ. ಶಾನೋನ್ ಅವರ ಆಧ್ಯಾತ್ಮಿಕ ಒಲವು ಮತ್ತು ಭಾರತೀಯ ಸಂಸ್ಕೃತಿಯ ಮೇಲಿನ ಪ್ರೀತಿ ನನ್ನನ್ನು ಹೆಚ್ಚು ಆಕರ್ಷಿಸಿತು," ಎಂದು ಸಂತಸ ವ್ಯಕ್ತಪಡಿಸಿದರು.
ಎರಡು ದೇಶಗಳು, ಎರಡು ವಿಭಿನ್ನ ಹಿನ್ನೆಲೆಗಳು ಮತ್ತು ವಿಭಿನ್ನ ಸಂಸ್ಕೃತಿಗಳ ನಡುವೆಯೂ ಭಕ್ತಿ, ಪರಸ್ಪರ ಗೌರವ ಹಾಗೂ ಜೀವನ ಮೌಲ್ಯಗಳು ಈ ಜೋಡಿಯನ್ನು ಒಂದಾಗಿಸಿವೆ. ಸಂಪಾಜೆಯಲ್ಲಿ ನಡೆದ ಈ ಅಪರೂಪದ ವಿವಾಹ, "ಪ್ರೀತಿಗೆ ಗಡಿಗಳಿಲ್ಲ, ಸಂಸ್ಕೃತಿಯನ್ನು ಮನಸಾರೆ ಅಪ್ಪಿಕೊಂಡರೆ ಜಗತ್ತೇ ಒಂದು ಕುಟುಂಬವಾಗುತ್ತದೆ" ಎಂಬ ಸಂದೇಶವನ್ನು ಸಾರುವ ಸ್ಪೂರ್ತಿದಾಯಕ ಕಥೆಯಾಗಿದೆ.