ಉಳ್ಳಾಲ, ಜು. 17 (DaijiworldNews/TA): ಉಳ್ಳಾಲ ಸಮುದ್ರ ತೀರದಲ್ಲಿ ಅಪರೂಪದ ಘಟನೆ ನಡೆದಿದ್ದು, ಒಂದೇ ಸಮನೆ ಸಾವಿರಾರು ಬೂತಾಯಿ ಮೀನುಗಳು ದಡಕ್ಕೆ ಅಪ್ಪಳಿಸಿದ ಪರಿಣಾಮ ಸ್ಥಳೀಯರಿಗೆ ಮೀನಿನ ಸುಗ್ಗಿಯೇ ದೊರಕಿದೆ.

ಮಾಹಿತಿಯ ಪ್ರಕಾರ, ಸಮುದ್ರದಲ್ಲಿ ಸಾಲುಸಾಲಾಗಿ ಸಾಗುತ್ತಿದ್ದ ಬೂತಾಯಿ ಮೀನುಗಳ ಗುಂಪು, ಹಾದುಹೋಗುತ್ತಿದ್ದ ದೋಣಿಯಿಂದ ಉಂಟಾದ ಶಬ್ದಕ್ಕೆ ದಿಕ್ಕು ಬದಲಿಸಿದೆ. ಇದರಿಂದ ಮೀನುಗಳು ನೇರವಾಗಿ ಸಮುದ್ರ ತೀರಕ್ಕೆ ಅಪ್ಪಳಿಸಿವೆ ಎಂದು ಹೇಳಲಾಗಿದೆ. ಮಧ್ಯಾಹ್ನ ಸುಮಾರು 11 ಗಂಟೆ ವೇಳೆಗೆ ತೀರದಲ್ಲಿ ಮೀನಿನ ರಾಶಿಯನ್ನು ಗಮನಿಸಿದ ಸ್ಥಳೀಯರು, ಅಲೆಗಳ ಅಬ್ಬರದ ನಡುವೆಯೇ ನಾಮುಂದು-ತಾಮುಂದು ಎಂದು ಮೀನುಗಳನ್ನು ಸಂಗ್ರಹಿಸಲು ಮುಂದಾದರು. ಕೆಲವರು ಮೀನುಗಳನ್ನು ಮಾರಾಟ ಮಾಡಿ ಲಾಭ ಪಡೆದರೆ, ಇನ್ನೂ ಕೆಲವರು ಮನೆಗೆ ಕೊಂಡೊಯ್ದು ಅಡುಗೆಗೆ ಬಳಸಿ ಬಾಡೂಟ ಮಾಡಿರಬಹುದು ಎನ್ನಲಾಗಿದೆ.
ಇಂತಹ ಘಟನೆಗಳು ಅಪರೂಪಕ್ಕೊಮ್ಮೆ ಮಾತ್ರ ಸಂಭವಿಸುತ್ತವೆ. ಕೆಲವು ತಿಂಗಳುಗಳ ಹಿಂದೆಯೂ ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ ಇದೇ ರೀತಿಯಾಗಿ ದೊಡ್ಡ ಪ್ರಮಾಣದ ಮೀನುಗಳು ದಡಕ್ಕೆ ಅಪ್ಪಳಿಸಿದ್ದ ಘಟನೆ ನಡೆದಿತ್ತು. ಈ ಬಾರಿ ಉಳ್ಳಾಲದಲ್ಲಿ ನಡೆದ ಈ ದೃಶ್ಯ ಸ್ಥಳೀಯರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವಿಡಿಯೊಗಳು ವೈರಲ್ ಆಗುತ್ತಿವೆ.