ಉಡುಪಿ, ಜು. 17 (DaijiworldNews/AA): ಕೊಡಿಬೆಂಗ್ರೆ ಡೆಲ್ಟಾ ಬೀಚ್ನಲ್ಲಿ ನಡೆದ ದೋಣಿ ದುರಂತದ ಹಿನ್ನೆಲೆ, ಕರಾವಳಿ ಭದ್ರತಾ ಪೊಲೀಸ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಜಲಕ್ರೀಡೆ ಹಾಗೂ ಬೋಟ್ ಸೇವೆಗಳ ನಿರ್ವಾಹಕರು ನಿಗದಿತ ಅವಧಿಯೊಳಗೆ ಅಗತ್ಯ ಪರವಾನಗಿಗಳನ್ನು ಪಡೆದುಕೊಳ್ಳಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಕರಾವಳಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


ಜನವರಿ 26ರಂದು ಕೊಡಿಬೆಂಗ್ರೆ ಡೆಲ್ಟಾ ಬೀಚ್ ಸಮೀಪ ಸಂಭವಿಸಿದ್ದ ದೋಣಿ ದುರಂತದ ಬಳಿಕ ಈ ಎಚ್ಚರಿಕೆ ನೀಡಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಸುಮಾರು 28 ಪ್ರವಾಸಿಗರು ಕೊಡಿಬೆಂಗ್ರೆ ಡೆಲ್ಟಾ ಬೀಚ್ನಿಂದ ಪಡುಕರೆ ಡಾನ್ ವ್ಯೂ ಪಾಯಿಂಟ್ಗೆ ಭೇಟಿ ನೀಡಲು ಸುಹಾಸ್ ಹಾಗೂ ಸುಫಿಯಾನ್ ಅವರಿಗೆ ಸೇರಿದ ಎರಡು ದೋಣಿಗಳಲ್ಲಿ ತೆರಳಿದ್ದರು. ವಾಪಸ್ ಬರುತ್ತಿದ್ದ ವೇಳೆ ಕಾನ್ಯಾನ ಗ್ರಾಮದ ಡೆಲ್ಟಾ ಬೀಚ್ ಕ್ರಾಸ್ ಸಮೀಪ ಉಂಟಾದ ಅಲೆಗಳ ಅಬ್ಬರದಿಂದ ಒಂದು ದೋಣಿ ಮಗುಚಿಬಿದ್ದ ಪರಿಣಾಮ ಸಿಂಧು ಹಾಗೂ ಶಂಕರಪ್ಪ ಮೃತಪಟ್ಟಿದ್ದರು.
ಈ ಘಟನೆ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಂಡಿದ್ದು, ಮೂವರು ಆರೋಪಿಗಳ ವಿರುದ್ಧ ಸಂಬಂಧಪಟ್ಟ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಕರಾವಳಿ ಭದ್ರತಾ ಪೊಲೀಸ್ ವ್ಯಾಪ್ತಿಯಲ್ಲಿ ಜಲಕ್ರೀಡೆ ಹಾಗೂ ಬೋಟ್ ಸೇವೆಗಳನ್ನು ನಡೆಸಲು ವಿವಿಧ ಸರ್ಕಾರಿ ಇಲಾಖೆಗಳ ಅಗತ್ಯ ಅನುಮತಿ ಮತ್ತು ಪರವಾನಗಿ ಕಡ್ಡಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ನೋಂದಾಯಿತ 227 ಜಲಕ್ರೀಡೆ ಬೋಟ್ ಮಾಲೀಕರಲ್ಲಿ ಕೇವಲ 42 ಮಂದಿ ಮಾತ್ರ ಮಾನ್ಯ ಪರವಾನಗಿ ಹೊಂದಿದ್ದರೆ, ಉಳಿದ 185 ಮಂದಿ ಅಗತ್ಯ ಅನುಮತಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದರು.
ಪರವಾನಗಿ ಪಡೆಯುವಿಕೆ ಹಾಗೂ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಕರಾವಳಿ ಭದ್ರತಾ ಪೊಲೀಸ್ ವ್ಯಾಪ್ತಿಯ ಎಲ್ಲಾ ಒಂಬತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೋಟ್ ಮಾಲೀಕರು ಮತ್ತು ನಿರ್ವಾಹಕರೊಂದಿಗೆ ಸಭೆಗಳನ್ನು ನಡೆಸಲಾಯಿತು. ಈ ಸಭೆಗಳಲ್ಲಿ ಕಾನೂನುಬದ್ಧ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳ ಕುರಿತು ವಿವರವಾಗಿ ತಿಳಿಸಲಾಯಿತು.
ಇದರ ಪರಿಣಾಮವಾಗಿ ಪರವಾನಗಿ ಪಡೆದ ಬೋಟ್ ಮಾಲೀಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, 227 ಬೋಟ್ ಮಾಲೀಕರಲ್ಲಿ 151 ಮಂದಿ ಈಗ ಅಗತ್ಯ ಪರವಾನಗಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಇನ್ನೂ 76 ಮಂದಿ ಬೋಟ್ ಮಾಲೀಕರು ತಮ್ಮ ಪರವಾನಗಿಯನ್ನು ನವೀಕರಿಸಿಕೊಂಡಿಲ್ಲ. ಪರವಾನಗಿ ನವೀಕರಣಕ್ಕೆ ಸಾಕಷ್ಟು ಸಮಯ ನೀಡಿದ್ದರೂ, ಸಂಬಂಧಪಟ್ಟ ನಿರ್ವಾಹಕರಿಂದ ನವೀಕರಣ ಪ್ರಕ್ರಿಯೆ ಪೂರ್ಣಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆದ್ದರಿಂದ ಜಲಕ್ರೀಡೆ ಹಾಗೂ ಬೋಟ್ ಸೇವೆ ನಡೆಸುತ್ತಿರುವ ಎಲ್ಲಾ ಬೋಟ್ ಮಾಲೀಕರು ಕಾರ್ಯಾಚರಣೆ ಆರಂಭಿಸುವ ಮೊದಲು ನಿಗದಿತ ಅವಧಿಯೊಳಗೆ ಪರವಾನಗಿ ಪಡೆದುಕೊಳ್ಳುವುದು ಅಥವಾ ನವೀಕರಿಸಿಕೊಳ್ಳುವುದು ಕಡ್ಡಾಯ ಎಂದು ಕರಾವಳಿ ಭದ್ರತಾ ಪೊಲೀಸರು ಸೂಚಿಸಿದ್ದಾರೆ.
ನಿಯಮಗಳನ್ನು ಪಾಲಿಸದೆ ಅನಧಿಕೃತವಾಗಿ ಸೇವೆ ನಡೆಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಇಂತಹ ಅನಧಿಕೃತ ಕಾರ್ಯಾಚರಣೆಯಿಂದ ಯಾವುದೇ ಅವಘಡ ಸಂಭವಿಸಿದರೆ ಅದರ ಸಂಪೂರ್ಣ ಹೊಣೆಯನ್ನು ಸಂಬAಧಿತ ಬೋಟ್ ಮಾಲೀಕರೇ ಹೊರಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.