Karavali
ಬಂಟ್ವಾಳ : ಮುರಿದ ಸಂಬಂಧ - ಹರಿದ ನೆತ್ತರು - ಕರಾವಳಿಯನ್ನು ಬೆಚ್ಚಿಬೀಳಿಸಿದ ಲಾವಣ್ಯ ಹತ್ಯೆಯ ಸಂಪೂರ್ಣ ವರದಿ
- Fri, Jul 17 2026 01:02:31 PM
-
ಬಂಟ್ವಾಳ, ಜು. 17 (DaijiworldNews/TA): ಹೊತ್ತು ಮುಳುಗೋ ಹೊತ್ತಲ್ಲಿ ಕರಾವಳಿಯಲ್ಲಿ ನೆತ್ತರ ಓಕುಳಿ ಹರಿದಿತ್ತು. ಒಂದು ಮನಸ್ತಾಪ, ನಾಲ್ಕು ವರ್ಷದ ವಿರಸ, ಸೇಡಿಗೆ ತಿರುಗಿದ ಒಡಕು, ಸಾಂತ್ವನಕ್ಕೆ ಒಗ್ಗದ ಮನಸ್ಸು ಕೋಪದ ಕೈಗೆ ಬುದ್ದಿ ಕೊಟ್ಟ ಕಾರಣ ಅಚಾತುರ್ಯವೊಂದು ನಡೆದೇ ಹೋಗಿತ್ತು. ಫಲಿಸದ ಪ್ರೀತಿ ಒಂದು ಭೀಕರ ಹತ್ಯೆಗೆ ಕಾರಣವಾಗಿತ್ತು. ಹಾಡ ಹಗಲೇ ನಡೆದ ಈ ಒಂದು ಕೊಲೆ ಕರಾವಳಿಗರನ್ನು ಬೆಚ್ಚಿ ಬೀಳಿಸಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ನಲ್ಲಿ ಗುರುವಾರ ಸಂಜೆ ನಡೆದ ಯುವತಿ ಲಾವಣ್ಯ ಹತ್ಯೆ ಪ್ರಕರಣ ಇಡೀ ಕರಾವಳಿಯನ್ನು ಬೆಚ್ಚಿಬೀಳಿಸಿದೆ. ಸಾರ್ವಜನಿಕರ ಸಮ್ಮುಖದಲ್ಲೇ ನಡೆದ ಈ ಘಟನೆ ಮಹಿಳೆಯರ ಸುರಕ್ಷತೆ, ಪ್ರೇಮ ಸಂಬಂಧಗಳಲ್ಲಿ ಉಂಟಾಗುವ ಹಿಂಸಾಚಾರ ಹಾಗೂ ಕಿರುಕುಳದ ಪ್ರಕರಣಗಳ ಕುರಿತು ಮತ್ತೆ ಆತಂಕ ಮೂಡಿಸಿದೆ. ಪ್ರಕರಣ ಸಂಬಂಧ ಚೇತನ್ ಎಂಬ ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದು, ಘಟನೆಯ ಹಿಂದಿನ ಸಂಬಂಧ, ದಾಳಿಗೆ ಕಾರಣವಾದ ಪರಿಸ್ಥಿತಿ ಹಾಗೂ ಇತರೆ ಸಾಕ್ಷ್ಯಾಧಾರಗಳ ಕುರಿತು ತನಿಖೆ ಮುಂದುವರಿದಿದೆ.
ಏನಿದು ಪ್ರಕರಣ? : ಮೃತ ಲಾವಣ್ಯ (21) ಬಂಟ್ವಾಳ ತಾಲೂಕಿನ ಕಕ್ಯಪದವು ನಿವಾಸಿಯಾಗಿದ್ದು, ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಉದ್ಯೋಗಿಯಾಗಿದ್ದರು. ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಮರಳಲು ಅವರು ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅದೇ ಬಸ್ನಲ್ಲಿ ಆರೋಪಿ ಚೇತನ್ ಕೂಡ ಪ್ರಯಾಣಿಸುತ್ತಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಸ್ ಬಿ.ಸಿ.ರೋಡ್ಗೆ ತಲುಪಿದ ಬಳಿಕವೂ ವಾಗ್ವಾದ ಮುಂದುವರಿದಿದೆ ಎನ್ನಲಾಗಿದೆ.
ಬಸ್ನಿಂದ ಇಳಿದ ಬಳಿಕ ಆರೋಪಿ ಹರಿತವಾದ ಆಯುಧದಿಂದ ಲಾವಣ್ಯ ಮೇಲೆ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಲಾವಣ್ಯ ಅವರನ್ನು ಕೂಡಲೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ನಾಲ್ಕು ವರ್ಷಗಳ ಹಿಂದೆಯೇ ಮುರಿದಿದ್ದ ಪ್ರೇಮ ಸಂಬಂಧ : ಕುಟುಂಬದವರ ಮಾಹಿತಿಯಂತೆ, ಲಾವಣ್ಯ ಮತ್ತು ಚೇತನ್ ನಡುವೆ ಸುಮಾರು ನಾಲ್ಕು ವರ್ಷಗಳ ಹಿಂದೆ ಪ್ರೇಮ ಸಂಬಂಧವಿತ್ತು. ಬಳಿಕ ವೈಯಕ್ತಿಕ ಕಾರಣಗಳಿಂದ ಇಬ್ಬರೂ ದೂರವಾಗಿದ್ದರು. ಆದರೆ ಸಂಬಂಧ ಮುರಿದ ನಂತರವೂ ಚೇತನ್ ಲಾವಣ್ಯ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ ಹಾಗೂ ಮತ್ತೆ ಸಂಬಂಧ ಮುಂದುವರಿಸಬೇಕೆಂದು ಒತ್ತಡ ಹೇರುತ್ತಿದ್ದ ಎನ್ನುವ ಆರೋಪವನ್ನು ಕುಟುಂಬದವರು ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲೂ ಈ ವಿಚಾರವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿತ್ತು ಎಂಬ ಮಾಹಿತಿಯೂ ಪೊಲೀಸರ ತನಿಖೆಯಲ್ಲಿ ಹೊರಬಂದಿದೆ.
ಬಸ್ನಲ್ಲೇ ಆರಂಭವಾದ ವಾಗ್ವಾದ : ಘಟನೆಯ ದಿನ ಇಬ್ಬರೂ ಒಂದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ನಲ್ಲೇ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಲಾವಣ್ಯ ಮನೆಗೆ ತೆರಳುವ ಮಾರ್ಗದಲ್ಲಿದ್ದಾಗ ಚೇತನ್ ಮತ್ತೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದು, ಅದಕ್ಕೆ ಯುವತಿ ನಿರಾಕರಿಸಿದ್ದಾಳೆ ಎಂಬ ಮಾಹಿತಿಯೂ ತನಿಖೆಯಲ್ಲಿ ಪರಿಶೀಲನೆಯಲ್ಲಿದೆ.
ಅಕ್ಕನಿಗೆ ಕರೆ... ನಂತರ ಬಾವನೊಂದಿಗೆ ಮಾತುಕತೆ : ಪ್ರಕರಣದ ಅತ್ಯಂತ ಮಹತ್ವದ ಅಂಶವೆಂದರೆ, ಘಟನೆಯ ಕೆಲವೇ ಕ್ಷಣಗಳ ಮೊದಲು ಲಾವಣ್ಯ ಅವರು ತಮ್ಮ ಅಕ್ಕನಿಗೆ ಕರೆ ಮಾಡಿದ್ದರು. ಕುಟುಂಬದವರ ಪ್ರಕಾರ, ಬಸ್ನಲ್ಲಿ ಚೇತನ್ ಕಿರಿಕಿರಿ ಮಾಡುತ್ತಿರುವುದಾಗಿ ಲಾವಣ್ಯ ತಮ್ಮ ಅಕ್ಕನಿಗೆ ತಿಳಿಸಿದ್ದರು. ನಂತರ ಅಕ್ಕನ ಪತಿ ಗೌತಮ್ ಅವರು ಲಾವಣ್ಯಗೆ ಕರೆ ಮಾಡಿದ್ದರು.
ಗೌತಮ್ ಮಾಧ್ಯಮಗಳಿಗೆ ನೀಡಿದ ಮಾಹಿತಿಯಂತೆ, ಕರೆ ಸ್ವೀಕರಿಸಿದ ವೇಳೆ ಚೇತನ್ ಲಾವಣ್ಯ ಪಕ್ಕದಲ್ಲೇ ಇದ್ದ. "ಅವನಿಗೆ ಮೊಬೈಲ್ ಕೊಡಿ, ಮಾತನಾಡುತ್ತೇನೆ ಎಂದು ಹೇಳುತ್ತಿದ್ದಷ್ಟರಲ್ಲಿ ಕಿರುಚಾಟ ಕೇಳಿಸಿತು. ಕೆಲವೇ ಕ್ಷಣಗಳಲ್ಲಿ ಘಟನೆ ನಡೆದಿದೆ" ಎಂದು ಅವರು ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆಯೇ ಆಸ್ಪತ್ರೆಯಲ್ಲಿ ಗಲಾಟೆ : ಪೊಲೀಸ್ ಮೂಲಗಳ ಪ್ರಕಾರ, ಸುಮಾರು ಒಂದು ತಿಂಗಳ ಹಿಂದೆಯೇ ಆರೋಪಿ ಚೇತನ್, ಲಾವಣ್ಯ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗೆ ತೆರಳಿ ಗಲಾಟೆ ನಡೆಸಿದ್ದ ಎನ್ನಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ, ಆರೋಪಿಯನ್ನು ಅಲ್ಲಿಂದ ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಆದರೆ, ಆ ಸಂದರ್ಭದಲ್ಲಿ ಈ ಸಂಬಂಧ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ, ಆಗಲೇ ಪ್ರಕರಣ ದಾಖಲಾಗಿ ಕಾನೂನು ಕ್ರಮ ಕೈಗೊಳ್ಳಲಾಗಿದ್ದರೆ ಈ ದುರಂತವನ್ನು ತಡೆಯಲು ಸಾಧ್ಯವಾಗುತ್ತಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಆಸ್ಪತ್ರೆಯ ಸಿಬ್ಬಂದಿ, ಕುಟುಂಬದವರು ಹಾಗೂ ಇತರ ಸಾಕ್ಷಿದಾರರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ.
24 ಗಂಟೆಯೊಳಗೆ ಆರೋಪಿಯ ಬಂಧನ : ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆ ನಡೆದ ತಕ್ಷಣ ಬಂಟ್ವಾಳ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಆರೋಪಿಯ ಪತ್ತೆ ಕಾರ್ಯ ಆರಂಭಿಸಿದರು. ಕೃತ್ಯ ಎಸಗಿದ ಬಳಿಕ ಆರೋಪಿ ಚೇತನ್ ತನ್ನ ಆಲ್ಟೋ ಕಾರಿನಲ್ಲಿ ಬಂಟ್ವಾಳದಿಂದ ಮಂಗಳೂರು ಕಡೆಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ತನಿಖೆ ವೇಳೆ ಹೊರಬಂದ ಮಾಹಿತಿಯಂತೆ, ಪರಾರಿಯಾಗಿದ್ದ ವೇಳೆ ಆತ ಮೃತ ಲಾವಣ್ಯ ಅವರ ತಂದೆಗೆ ದೂರವಾಣಿ ಕರೆ ಮಾಡಿ, "ನಾನು ನಿಮ್ಮ ಮಗಳನ್ನು ಕೊಂದಿದ್ದೇನೆ. ಈಗ ನಾನೂ ಜೀವನ ಕೊನೆಗೊಳಿಸಿಕೊಳ್ಳುತ್ತೇನೆ" ಎಂದು ಹೇಳಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಸುಮಾರು 24 ಗಂಟೆಯೊಳಗೆ ಮಂಗಳೂರು ಹೊರವಲಯದ ವಾಮಂಜೂರು-ಪಚ್ಚನಾಡಿ ಪ್ರದೇಶದಲ್ಲಿ ಕಾರಿನಲ್ಲಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದರು. ಬಂಧಿಸುವ ವೇಳೆ ಆತ ವಿಷ ಸೇವಿಸಿರುವುದಾಗಿ ತಿಳಿಸಿದ್ದರಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ಸ್ಥಿರಗೊಂಡ ಬಳಿಕ ಆರೋಪಿಯನ್ನು ಮತ್ತೆ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರೆದಿದ್ದು, ಕರೆ ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು ಹಾಗೂ ಇತರೆ ತಾಂತ್ರಿಕ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪೊಲೀಸರ ತನಿಖೆ ಯಾವ ಹಂತದಲ್ಲಿದೆ? :
ಪ್ರಸ್ತುತ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದಿನ ಪ್ರೇಮ ಸಂಬಂಧದ ಹಿನ್ನೆಲೆ, ಬ್ರೇಕ್ಅಪ್ ಬಳಿಕ ಇಬ್ಬರ ನಡುವೆ ಸಂಪರ್ಕ ಮುಂದುವರಿದಿತ್ತೇ?, ಕಿರುಕುಳದ ಕುರಿತು ಈ ಹಿಂದೆ ಯಾವುದೇ ದೂರು ದಾಖಲಾಗಿತ್ತೇ?, ಘಟನೆಯ ದಿನ ನಡೆದ ದೂರವಾಣಿ ಕರೆಗಳ ವಿವರ, ಬಸ್ ಹಾಗೂ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಗಳು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, ಬಳಸಿದ ಆಯುಧದ ಮೂಲ ಹಾಗೂ ಇತರೆ ವೈಜ್ಞಾನಿಕ ಸಾಕ್ಷ್ಯಗಳು ಈ ಎಲ್ಲ ಅಂಶಗಳನ್ನು ಆಧರಿಸಿ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
ಕುಟುಂಬದವರ ಆಕ್ರಂದನ : ಲಾವಣ್ಯ ಅವರ ಸಾವಿನಿಂದ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಆರೋಪಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಲಾವಣ್ಯ ಅವರ ತಂದೆ ಬಾಲಕೃಷ್ಣ ಗೌಡ ಮಾತನಾಡಿ, "ನಮಗೆ ಮಗಳಿಗೆ ನ್ಯಾಯ ಬೇಕು. ತಪ್ಪಿತಸ್ಥನ ವಿರುದ್ಧ ಕಾನೂನಿನ ಪ್ರಕಾರ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.
ಸಂಬಂಧ ಮುರಿದ ಬಳಿಕವೂ ನಡೆಯುವ ಹಿಂಬಾಲಿಸುವಿಕೆ, ಕಿರುಕುಳ ಮತ್ತು ಹಿಂಸಾತ್ಮಕ ವರ್ತನೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರಿಗೆ ಬೆದರಿಕೆ ಅಥವಾ ಕಿರುಕುಳದ ಘಟನೆಗಳು ಕಂಡುಬಂದಾಗ ತಕ್ಷಣ ಪೊಲೀಸರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ. ಪ್ರಕರಣ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ. ಮೊಬೈಲ್ ಕರೆ ದಾಖಲೆಗಳು, ಸಿಸಿಟಿವಿ ದೃಶ್ಯಗಳು, ಸಾಕ್ಷಿದಾರರ ಹೇಳಿಕೆಗಳು ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿದಿದೆ.