ಉಪ್ಪಿನಂಗಡಿ, ಜು.16 (DaijiworldNews/TA): ಸಾರ್ವಜನಿಕ ವಲಯ ಮತ್ತು ಬ್ಯಾಂಕಿಂಗ್ ವ್ಯವಸ್ಥೆಗೆ ತಲೆನೋವಾಗಿದ್ದ ನಕಲಿ ನೋಟು ತಯಾರಿಕೆ ಜಾಲವೊಂದನ್ನು ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಈ ಪ್ರಕರಣದಲ್ಲಿ 7 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ನಕಲಿ ನೋಟು ಮುದ್ರಣಕ್ಕೆ ಬಳಸಲಾಗುತ್ತಿದ್ದ ಯಂತ್ರೋಪಕರಣಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.



ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಡಿಂಜೆ ಪ್ರದೇಶದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ನಕಲಿ ಭಾರತೀಯ ಕರೆನ್ಸಿ ಮುದ್ರಣಕ್ಕೆ ಬಳಸಲಾಗುತ್ತಿದ್ದ ಮುದ್ರಣ ಯಂತ್ರಗಳು, ಸ್ಕ್ಯಾನರ್ಗಳು, ವಿಶೇಷ ಕಾಗದ ಹಾಗೂ ಮುದ್ರಣ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಬಂಧಿತರು ದಕ್ಷಿಣ ಕನ್ನಡ ಹಾಗೂ ಕೇರಳದ ವಿವಿಧ ಭಾಗಗಳಿಗೆ ಸೇರಿದವರಾಗಿದ್ದು, ನಕಲಿ ನೋಟುಗಳನ್ನು ಗಡಿ ಭಾಗದ ವ್ಯಾಪಾರ ಕೇಂದ್ರಗಳು, ಪೆಟ್ರೋಲ್ ಬಂಕ್ಗಳು ಹಾಗೂ ಮಾರುಕಟ್ಟೆಗಳಲ್ಲಿ ಚಲಾವಣೆ ಮಾಡುವ ಸಂಚು ರೂಪಿಸಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಜಾಲದ ಹಿಂದೆ ಇನ್ನೂ ಹೆಚ್ಚಿನ ವ್ಯಕ್ತಿಗಳು ಅಥವಾ ಸಂಘಟಿತ ಜಾಲದ ಕೈವಾಡವಿದೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.