ಕಾಸರಗೋಡು, ಜು.16 (DaijiworldNews/TA): ಸರಕಾರಿ ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವೇಳೆ ಒಂಬತ್ತು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಇನ್ನು ಘಟನೆಯ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಆರೋಗ್ಯ ಇಲಾಖೆ ಆದೇಶಿಸಿದೆ.

ಬೇಡಡ್ಕ ದ ಅಶ್ರಫ್ ಮತ್ತು ಬುಷ್ರಾ ದಂಪತಿಯ ಪುತ್ರ ಮುಹಮ್ಮದ್ ಇಯಾಸ್ ಮೃತಪಟ್ಟ ಬಾಲಕ. ಈತ ಕುಂಡಂಗುಳಿ ಸರ್ಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದ. ಉದರ ಸಂಬಂಧಿ ಸಮಸ್ಯೆಗೆ ಸಣ್ಣ ಶಸ್ತ್ರಚಿಕಿತ್ಸೆ ನಡೆಸಲು ಬುಧವಾರ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಯುತ್ತಿದ್ದಾಗ ಬಾಲಕನಿಗೆ ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಿದ್ದೇ ಸಾವಿಗೆ ಕಾರಣ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಮಗು ಮೃತಪಟ್ಟ ನಂತರವಷ್ಟೇ ನಮಗೆ ಮಾಹಿತಿ ನೀಡಲಾಗಿದೆ ಎಂದು ತಂದೆ ಅಶ್ರಫ್ ಆಕ್ರೋಶ ಹೊರಹಾಕಿದ್ದಾರೆ.
ವೈದ್ಯರ ಚಿಕಿತ್ಸಾ ಲೋಪವೇ ಸಾವಿಗೆ ಕಾರಣ ಎಂದು ಆರೋಪಿಸಿ ಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾವಿನ ನಿಖರ ಕಾರಣ ತಿಳಿಯಲು ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.