ಮಂಗಳೂರು, ಜು.16 (DaijiworldNews/AK):ಮಾನವೀಯ ಸೇವೆಯ ಮೂಲಕ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿರುವ ಬಿರುವೆರ್ ಕುಡ್ಲ ಸಂಘಟನೆಯ ನೇತೃತ್ವದಲ್ಲಿ, ದುಬಾಯಿ ಘಟಕದ ಆಶ್ರಯದಲ್ಲಿ ಎರಡು ಅಸಹಾಯಕ ಕುಟುಂಬಗಳಿಗೆ ಒಟ್ಟು 1,65,000 ರೂ. ಆರ್ಥಿಕ ನೆರವನ್ನು ವಿತರಿಸಲಾಯಿತು.

ಅನಾರೋಗ್ಯದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ 55,000 ರೂ ಹಾಗೂ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ದುರ್ಗಾಪ್ರಸಾದ್ ಅವರ ಚಿಕಿತ್ಸೆಗೆ 1,10,000 ರೂ. ನೆರವನ್ನು ಸಂಘಟನೆಯ ಪದಾಧಿಕಾರಿಗಳು ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ಅವರು, "ಬಿರುವೆರ್ ಕುಡ್ಲ ಸಂಘಟನೆಯು ಕಳೆದ ಹಲವು ವರ್ಷಗಳಿಂದ ಜಾತಿ-ಧರ್ಮ-ಭೇದ ಮೀರಿ ಸೇವೆ ಮಾಡುತ್ತಿದೆ. ದುಬಾಯಿಯಲ್ಲಿ ದುಡಿಯುವ ಕನ್ನಡಿಗರು ಕೂಡ ತಮ್ಮ ಊರಿನ ಜನರಿಗಾಗಿ ಈ ರೀತಿ ಕೈಜೋಡಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇಂತಹ ಸಂಘಟನೆಗಳೇ ನಿಜವಾದ ಸಮಾಜದ ಬೆನ್ನೆಲುಬು" ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಅವರು ಮಾತನಾಡಿ, "ಬಿರುವೆರ್ ಕುಡ್ಲದ ಉದಯ ಪೂಜಾರಿ ಮತ್ತು ತಂಡದವರು ಮಾಡುತ್ತಿರುವ ಉತ್ತಮ ಸೇವಾಕಾರ್ಯ ಮುಂದೆಯೂ ಹೀಗೆ ನಿರಂತರವಾಗಿ ನಡೆಯಲಿ. ಯುವಕರ ಈ ಸಮಾಜಮುಖಿ ಕೆಲಸಕ್ಕೆ ನನ್ನ ಪೂರ್ಣ ಬೆಂಬಲವಿದೆ" ಎಂದು ಹಾರೈಸಿದರು.
ದುಬಾಯಿ ಘಟಕದ ಅಧ್ಯಕ್ಷ _ಸಂದೀಪ್ ಕೋಟ್ಯಾನ್ ಅವರು ಮಾತನಾಡಿ, ಇಲ್ಲಿಯ ಪ್ರದೇಶದಿಂದ ಉದ್ಯೋಗಕ್ಕಾಗಿ ವಿದೇಶದಲ್ಲಿರುವ ನಮ್ಮ ಸಮಾನ ಮನಸ್ಕರ ತಂಡವು
ಬಿರುವೆರ್ ಕುಡ್ಲ ಸ್ಥಾಪಕಧ್ಯಕ್ಷ ಉದಯ ಪೂಜಾರಿ ಅವರ ಪ್ರೇರಣೆಯಲ್ಲಿ ಹಣವನ್ನು ಕೂಡಿಸಿ ನೆರವು ನೀಡುತ್ತಾ ಬರುತ್ತಿದ್ದೇವೆ. ಇಂದು 1,65,000 ರೂಪಾಯಿ ನೆರವನ್ನು ಎರಡು ಕುಟುಂಬ ಕ್ಕೆ ಓದ ಗಿಸಿದ್ದೇವೆ ಎಂದರು.
ಸಂಘಟನೆಯ ಸೇವೆಯನ್ನು ಕೊಂಡಾಡಿದ ನಾಯಕರು
ಬಿರುವೆರ್ ಕುಡ್ಲ ಸಂಘಟನೆಯು ಕಳೆದ 8 ವರ್ಷಗಳಲ್ಲಿ ₹10 ಕೋಟಿಗೂ ಹೆಚ್ಚು ಮೌಲ್ಯದ ವೈದ್ಯಕೀಯ, ಶೈಕ್ಷಣಿಕ ಮತ್ತು ಮನೆ ನಿರ್ಮಾಣ ನೆರವನ್ನು ನೀಡಿದೆ. ಕೋವಿಡ್ ಸಮಯದಲ್ಲಿ ಉಚಿತ ಆಂಬ್ಯುಲೆನ್ಸ್, ರೇಷನ್ ಕಿಟ್ ವಿತರಿಸಿ ಮಾದರಿಯಾಗಿದೆ.
ದುಬಾಯಿಯಂತಹ ವಿದೇಶದಲ್ಲೂ ಸಂಘಟನೆಯ ಘಟಕ ತೆರೆದು ನೆರವು ನೀಡುತ್ತಿರುವುದು ನಾಡಿನಾದ್ಯಂತ ಮೆಚ್ಚುಗೆ ಪಾತ್ರವಾಗಿದೆ. ಬೋಳೂರು ಮೊಗವೀರ ಮಹಾಸಭಾ ಅಧ್ಯಕ್ಷ ಸುಭಾಶ್ ಬೋಳೂರು, ವಸಂತ್ ಪೂಜಾರಿ, ಏಸ್ ಡೆವಲಪ್ಪೆರ್ಸ್ ಮಾಲಕ, ದಾನಿ ದರ್ಶನ್ ಜೈನ್, ರಣ್ ದೀಪ್ ಕಾಂಚನ್, ಬಿರುವೆರ್ ಕುಡ್ಲ ಸಂಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ, ಅಧ್ಯಕ್ಷ ರಾಕೇಶ್ ಬಲ್ಲಾಳ್ ಬಾಗ್, ಕಾರ್ಕಳ_, ಅಶ್ವಿನ್ ರಾಜ್ ಚಿಲಿಂಬಿ, ಲೋಹಿತ್ ಗಟ್ಟಿ, ರಾಮ್ ಎಕ್ಕೂರು, ದಿನಿಲ್ ಬಲ್ಲಾಲ್ ಭಾಗ್, ಗಿರೀಶ್ ಬೋಳೂರು, ಗಣೇಶ್ ಎಕ್ಕೂರು, ದುಬೈ ಘಟಕದ ರಿತೇಶ್ ಉಳ್ಳಾಲ, ಸಂಘಟನೆಯ ಜಿಲ್ಲಾ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ದಾನಿಗಳು ಹಾಗೂ ಫಲಾನುಭವಿಗಳ ಕುಟುಂಬದವರು ಉಪಸ್ಥಿತರಿದ್ದರು.