ಮಂಗಳೂರು, ಜು.16 (DaijiworldNews/TA): ವರ್ಷದ ಹಿಂದೆ ಮಂಗಳೂರಿಗೆ ಪೂನಾದಿಂದ ತರಲಾಗಿದ್ದ ಟಿ-55 ಹಳೇ ಯುದ್ಧ ಟ್ಯಾಂಕನ್ನು ಕೊನೆಗೂ ಕದ್ರಿಯ ಹುತಾತ್ಮರ ಸ್ಮಾರಕದ ಬಳಿಗೆ ಸ್ಥಳಾಂತರಿಸಲಾಗಿದೆ.





ವರ್ಷದ ಹಿಂದೆಯಷ್ಟೇ ಇದನ್ನು ತಂದು ಕದ್ರಿ ಸರ್ಕಿಟ್ ಹೌಸ್ ಬಳಿ ಇರಿಸಲಾಗಿತ್ತು. ಭಾರತೀಯ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದ ಹಳೇ ಟ್ಯಾಂಕ್ ಇದಾಗಿದ್ದು, ಯುದ್ಧದಿಂದ ನಿವೃತ್ತಿ ಬಳಿಕ ಪೂನಾದ ಕಿರ್ಕೀ ಡಿಫೆನ್ಸ್ ಡಿಪೊದಲ್ಲಿ ಇರಿಸಲಾಗಿತ್ತು. ಸಂಸದ ಕ್ಯಾ। ಬ್ರಿಜೇಶ್ ಚೌಟ ಅವರ ಮನವಿಯಂತೆ ಮಂಗಳೂರಿನಲ್ಲಿ ಈ ಟ್ಯಾಂಕ್ ಅನ್ನು ಸ್ಫೂರ್ತಿದಾಯಕ ಪ್ರದರ್ಶನಕ್ಕೆ ಇರಿಸುವುದಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅನುಮತಿ ಕೊಟ್ಟಿದ್ದರು.
ಇದನ್ನು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಂಗಳೂರಿಗೆ ಕಳೆದ ವರ್ಷ ಟ್ರೈಲರ್ ಲಾರಿಯಲ್ಲಿ ತರಲಾಗಿತ್ತು. ಪ್ರಸ್ತುತ ಮನಪಾ ವತಿಯಿಂದಲೇ ಇದನ್ನು ನಿರ್ವಹಿಸಲಾಗುತ್ತಿದ್ದು, ಕದ್ರಿ ವಾರ್ ಮೆಮೊರಿಯಲ್ ಬಳಿ ಇದಕ್ಕೆ ವೇದಿಕೆ ನಿರ್ಮಿಸಿ ಪ್ರದರ್ಶನಕ್ಕೆ ಇರಿಸಲಾಗುತ್ತಿದೆ. ಬುಧವಾರ ಸಂಜೆ ಕ್ರೇನ್ ಬಳಸಿ ಟ್ಯಾಂಕ್ ಅನ್ನು ವ್ಯವಸ್ಥಿತವಾಗಿ ವೇದಿಕೆಯ ಮೇಲೆ ಇರಿಸಲಾಯಿತು. ಸುಮಾರು 38 ಲಕ್ಷ ರೂ. ವೆಚ್ಚದಲ್ಲಿ ವೇದಿಕೆ ನಿರ್ಮಿಸಲಾಗಿದೆ. ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸದಂದು ಟ್ಯಾಂಕ್ ಅನ್ನು ವೀಕ್ಷಣೆಗೆ ಅನಾವರಣ ಮಾಡಲಾಗುವುದು ಎನ್ನಲಾಗಿದೆ.