ಉಡುಪಿ, ಜು. 16 (DaijiworldNews/TA): ಅಂತಾರಾಷ್ಟ್ರೀಯ ಮಾದಕ ದ್ರವ್ಯ ನಿಷೇಧ ದಿನದ ಅಂಗವಾಗಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕಾರಾಗೃಹದಲ್ಲಿರುವ 145 ಖೈದಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಖೈದಿಗಳಿಗೆ ಟಿಬಿ, ಎಕ್ಸ-ರೇ, ICTC, ಹೆಪಟೈಟಿಸ್-ಬಿ ಮತ್ತು ಸಿ-ಡ್ರಗ್ ಟೆಸ್ಟ್, ರಕ್ತದೊತ್ತಡ, ಮಧುಮೇಹ, ಸಿಪ್ಲಿಸ್, ಸಾಮಾನ್ಯ ತಪಾಸಣೆ ಮತ್ತು ಉಪಚಾರವನ್ನು ಹಾಗೂ ಮಾದಕ ವಸ್ತುಗಳ ಪತ್ತೆ ಹಚ್ಚುವ ಪರೀಕ್ಷೆಗಳನ್ನು ನಡೆಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯ ಡಾ.ವಿಶ್ವಾಸ್ ಶೆಟ್ಟಿ, ಕೋಟ ಸಮುದಾಯ ಆರೋಗ್ಯ ಕೇಂದ್ರದ ಡಾ.ಪ್ರಭು ಮತ್ತು ವೈದ್ಯಕೀಯ ತಂಡದವರು ಆರೋಗ್ಯ ತಪಾಸಣೆ ನಡೆಸಿದರು. ಮಾದಕ ದ್ರವ್ಯ ಪತ್ತೆಹಚ್ಚುವ ತಪಾಸಣೆಯಲ್ಲಿ 145 ಖೈದಿಗಳ ವರದಿಯು ನೆಗೆಟಿವ್ ಬಂದಿದ್ದು ವೈದ್ಯರ ತಂಡವು ಸಂತಸ ವ್ಯಕ್ತಪಡಿಸಿದೆ. ಜಿಲ್ಲಾ ಕಾರಾಗೃಹವನ್ನು ತಂಬಾಕು ಮುಕ್ತ ಕಾರಾಗೃಹ ಎಂದು ಘೋಷಿಸಲು ಮನವಿ ಮಾಡಿದರು. ಕಾರಾಗೃಹದ ಅಧಿಕಾರಿಗಳಾದ ಡಿ.ಆರ್.ಕೊಣಿ, ಎಸ್.ಎ.ಶಿರೋಳ, ಆರ್.ಎಸ್.ಲಮಾಣ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.