ಮಂಗಳೂರು, ಜು. 12 (DaijiworldNews/AA): ಉಳ್ಳಾಲ ಸಮೀಪದ ಮಾಡೂರು ಶಾಲೆಯಲ್ಲಿ ಎಸ್ಐಆರ್ ಸಮೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಹುಡುಕುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಮೃತರನ್ನು ಕೊಲ್ಯ ನಿವಾಸಿ ಹರೀಶ್ ಗಟ್ಟಿ ಎಂದು ಗುರುತಿಸಲಾಗಿದೆ.
ಹರೀಶ್ ಗಟ್ಟಿ ಅವರು ಎಸ್ಐಆರ್ ಸಮೀಕ್ಷೆಗೆ ಅಗತ್ಯವಿರುವ ದಾಖಲೆಗಳನ್ನು ಪರಿಶೀಲಿಸಲು ಹಾಗೂ ಸಂಬಂಧಿತ ದಾಖಲಾತಿಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಮಾಡೂರು ಶಾಲೆಗೆ ತೆರಳಿದ್ದರು. ಈ ವೇಳೆ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೇ ಅವರ ನೆರವಿಗೆ ಧಾವಿಸಿ ಪ್ರಾಥಮಿಕ ನೆರವು ನೀಡಲು ಪ್ರಯತ್ನಿಸಿದರೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಘಟನೆಯ ಬಳಿಕ ಪಾಲಿಕೆ ಸದಸ್ಯ ಸುಜಿತ್ ಮಾಡೂರು, ತಹಶೀಲ್ದಾರ್ ಹಾಗೂ ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.