ಮಂಗಳೂರು, ಜು. 12 (DaijiworldNews/TA): ಭಾರತೀಯ ಚಿತ್ರರಂಗದ ಸ್ವರಸುಧೆ, ಗಾನಕೋಗಿಲೆ ಎಸ್. ಜಾನಕಿ ಅವರು 88ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಸಂಗೀತ ಲೋಕವನ್ನು ಶೋಕ ಸಾಗರದಲ್ಲಿ ಮುಳುಗಿಸಿದ್ದಾರೆ. ಸುಮಾರು ಏಳು ದಶಕಗಳ ಸಂಗೀತ ಪಯಣದಲ್ಲಿ 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಜಾನಕಿ ಅವರ ಅಗಲಿಕೆಗೆ ದೇಶಾದ್ಯಂತ ಕಂಬನಿ ಮಿಡಿದಿದೆ.




ವಿಶೇಷವೆಂದರೆ, ನಿಧನಕ್ಕೂ ಕೇವಲ 15 ದಿನಗಳ ಹಿಂದಷ್ಟೇ ಎಸ್. ಜಾನಕಿ ಅವರು ಮಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ನಗರದ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ ಹಾಗೂ ಕಮಲಶಿಲೆ ಕ್ಷೇತ್ರಕ್ಕೆ ತೆರಳಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು. ಅವರ ಈ ಭೇಟಿಯ ಚಿತ್ರಗಳು ಇದೀಗ ಅಭಿಮಾನಿಗಳಲ್ಲಿ ಭಾವುಕತೆಯನ್ನು ಮೂಡಿಸುತ್ತಿವೆ.
ಸುಮಾರು 7-8 ದಿನಗಳ ಕಾಲ ಮಂಗಳೂರಿನಲ್ಲೇ ಕಾಲ ಕಳೆದಿದ್ರು...ಈ ಸಂದರ್ಭದ ಒಂದು ಭಾವುಕ ಕ್ಷಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಾಣ್ಲಿಕ್ಕೆ ಸಿಕ್ಕಿದೆ. ಮಂಗಳೂರಿನಲ್ಲಿ ಎಸ್ ಜಾನಕಿ ಅವರ ಅಭಿಮಾನಿ ಇಶಾನ್ ಅವರು ಅವರನ್ನು ಭೇಟಿಯಾಗಿ ಸುಮಾರು 90 ನಿಮಿಷಗಳ ಕಾಲ ಅವರೊಂದಿಗೆ ಕಳೆದಿದ್ರಂತೆ. ಈ ವೇಳೆ ಇಶಾನ್ ಅವರು ಸುಮಾರು 10 ಹಾಡುಗಳನ್ನು ಹಾಡಿದ್ದು, ಜಾನಕಿ ಅವರು ಅತ್ಯಂತ ಪ್ರೀತಿಯಿಂದ ಅದನ್ನು ಕೇಳಿ, ಪ್ರೋತ್ಸಾಹಿಸಿ ಆಶೀರ್ವದಿಸಿದ್ದರು. ಜಾನಕಿ ಅಮ್ಮನ ಆ ಸರಳತೆ ಹಾಗೂ ಆತ್ಮೀಯತೆಗೆ ಮನಸೋತಿದ್ದೇನೆ ಅಂತ ಅವರು ಹೇಳಿಕೊಂಡಿದ್ದಾರೆ.. "ಹೀಗೆ ಒಳ್ಳೆಯದಾಗಿ ಹಾಡು ಕಂದಾ" ಅಂತ ಜಾನಕಿ ಅಮ್ಮ ಅವರು ನನ್ನ ಕಿವಿಯಲ್ಲಿ ಹೇಳಿದ ಮಾತುಗಳನ್ನು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ.. ಗಾಯನದ ಬಗ್ಗೆ ನೀಡಿದ ಪ್ರೋತ್ಸಾಹದ ಮಾತುಗಳು ಹಾಗೂ ಆಶೀರ್ವಾದವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ..ಅವರು ನನಗೆ ನೀಡಿದ ಹಣವನ್ನು ಅಮೂಲ್ಯ ನೆನಪಾಗಿ ಕಾಪಾಡಿಕೊಳ್ಳುತ್ತೇನೆ.. ಜಾನಕಿ ಅವರೊಂದಿಗೆ ಕಳೆದ ಆ 90 ನಿಮಿಷಗಳು ನನ್ನ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದು.. ಆ ಭೇಟಿಯೇ ಕೊನೆಯ ಭೇಟಿಯಾಗಲಿದೆ ಎಂದು ಊಹಿಸಿರಲಿಲ್ಲ ಅಂತ ಅಭಿಮಾನಿ ಇಶಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
1950ರ ದಶಕದ ಅಂತ್ಯದಲ್ಲಿ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಎಸ್. ಜಾನಕಿ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಅಮರ ಗೀತೆಗಳಿಗೆ ಧ್ವನಿಯಾಗಿದ್ದರು. ಮಧುರ ಕಂಠ, ಭಾವಪೂರ್ಣ ಗಾಯನ ಮತ್ತು ವಿಭಿನ್ನ ಶೈಲಿಯ ಮೂಲಕ ಅವರು ಭಾರತೀಯ ಸಂಗೀತ ಲೋಕದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಕನ್ನಡ ಚಿತ್ರರಂಗ, ದಕ್ಷಿಣ ಭಾರತದ ಚಿತ್ರೋದ್ಯಮ, ಸಂಗೀತ ಕ್ಷೇತ್ರದ ಗಣ್ಯರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ. "ಒಂದು ಯುಗವೇ ಅಂತ್ಯಗೊಂಡಿದೆ" ಎಂದು ಅನೇಕರು ಭಾವುಕವಾಗಿ ನುಡಿದಿದ್ದಾರೆ. ಕುಟುಂಬದ ಮೂಲಗಳ ಪ್ರಕಾರ, ಭಾನುವಾರ ಮೈಸೂರಿನಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅವರ ಮೊಮ್ಮಗಳು ಅಪ್ಸರಾ ಅವರಿಂದ ಅಂತ್ಯಸಂಸ್ಕಾರ ನೆರವೇರಲಿದೆ. ಗಾನಕೋಗಿಲೆ ಎಸ್. ಜಾನಕಿ ಅವರು ದೇಹತಃ ನಮ್ಮೊಂದಿಗಿಲ್ಲದಿದ್ದರೂ, ಅವರು ಹಾಡಿದ ಸಾವಿರಾರು ಅಮರ ಗೀತೆಗಳು ಸದಾ ಸಂಗೀತಾಸಕ್ತರ ಹೃದಯದಲ್ಲಿ ಜೀವಂತವಾಗಿರಲಿವೆ. ಕನ್ನಡಿಗರ ಮನೆಮನೆಗಳಲ್ಲಿ, ಪ್ರತಿಯೊಂದು ಸಂಗೀತ ಪ್ರಿಯರ ಮನಸ್ಸಿನಲ್ಲಿ ಅವರ ಧ್ವನಿ ಎಂದೆಂದಿಗೂ ಮೊಳಗುತ್ತಲೇ ಇರುತ್ತದೆ.