ಮಂಗಳೂರು, ಜು. 11 (DaijiworldNews/AA): ಬೆಂಗಳೂರು ಕರ್ನಾಟಕದ ಅತ್ಯಂತ ಅಭಿವೃದ್ಧಿ ಹೊಂದಿದ ನಗರವಾಗಿ ಮುಂದುವರಿದಿದ್ದರೂ, ಮಂಗಳೂರು ರಾಜ್ಯದ ವೇಗವಾಗಿ ಬೆಳೆಯುತ್ತಿರುವ ನಗರ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ. ಹೂಡಿಕೆಗಳು, ಪರಿಸರ ಸ್ನೇಹಿ ಜೀವನಶೈಲಿ ಮತ್ತು ಉದ್ಯೋಗಾವಕಾಶಗಳ ವಿಸ್ತರಣೆಯಿಂದಾಗಿ, ಕರಾವಳಿ ನಗರವು ದಕ್ಷಿಣ ಭಾರತದ ಅತ್ಯಂತ ವಾಸಯೋಗ್ಯ ನಗರಗಳಲ್ಲಿ ಒಂದೆAದು ಗುರುತಿಸಿಕೊಳ್ಳುತ್ತಿದೆ.

2025ರ ಅಂಕಿಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯು ತಲಾ ಜಿಡಿಪಿ 6.69 ಲಕ್ಷ ರೂಪಾಯಿಗಳೊಂದಿಗೆ ಕರ್ನಾಟಕದ ಅತ್ಯಂತ ಶ್ರೀಮಂತ ಜಿಲ್ಲೆಗಳಲ್ಲಿ ಒಂದಾಗಿದೆ. ಬೆಂಗಳೂರನ್ನು ಹೊರತುಪಡಿಸಿದರೆ, ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ತಲಾ ಆದಾಯವಾಗಿದೆ. ವ್ಯಾಪಾರ, ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಪ್ರಗತಿಯು ಈ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ.
ನವ ಮಂಗಳೂರು ಬಂದರು ದೇಶದ ಪ್ರಮುಖ ಕಂಟೈನರ್ ಟರ್ಮಿನಲ್ಗಳಲ್ಲಿ ಒಂದಾಗಿದ್ದು, ಭಾರತದ ಕಾಫಿ ರಫ್ತಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲದೆ, ಮಂಗಳೂರಿನ ಮಾಹಿತಿ ತಂತ್ರಜ್ಞಾನ ವಲಯವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. 2018ರಲ್ಲಿ ಸುಮಾರು 300 ಕೋಟಿ ರೂಪಾಯಿಗಳಷ್ಟಿದ್ದ ಐಟಿ ಆದಾಯವು 2024ರ ವೇಳೆಗೆ 2,500 ಕೋಟಿ ರೂಪಾಯಿಗಳನ್ನು ದಾಟಿದೆ.
ನಗರದ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಸ್ಥಿರವಾಗಿದೆ. ಗಲ್ಫ್ ದೇಶಗಳಲ್ಲಿ ಕೆಲಸ ಮಾಡುವ ದಕ್ಷಿಣ ಕನ್ನಡದ ಜನರು ಇಲ್ಲಿನ ಆಸ್ತಿ ಹೂಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವಸತಿ ಆಸ್ತಿಯ ಮೌಲ್ಯವು ವಾರ್ಷಿಕವಾಗಿ ಸುಮಾರು 8 ರಿಂದ 12 ಪ್ರತಿಶತದಷ್ಟು ಏರಿಕೆಯನ್ನು ಕಾಣುತ್ತಿದೆ.
ದಟ್ಟಣೆಯಿಲ್ಲದ ರಸ್ತೆಗಳು, ಸುಧಾರಿತ ಆರೋಗ್ಯ ವ್ಯವಸ್ಥೆ ಮತ್ತು ಉತ್ತಮ ಮೂಲಸೌಕರ್ಯಗಳೊಂದಿಗೆ, ಮಂಗಳೂರು ಅತ್ಯುತ್ತಮ ವಾಸಯೋಗ್ಯ ನಗರವಾಗಿ ಹೆಸರು ಗಳಿಸುತ್ತಿದೆ. ಮುಂಬರುವ ವರ್ಷಗಳಲ್ಲಿ ರಾಜ್ಯದ ಮುಂದಿನ ಪ್ರಮುಖ ಆರ್ಥಿಕ ಶಕ್ತಿಯಾಗಿ ಮಂಗಳೂರು ಹೊರಹೊಮ್ಮುವ ನಿರೀಕ್ಷೆಯಿದೆ.