ಉಡುಪಿ, ಜು. 11 (DaijiworldNews/TA): ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಶನಿವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ವಿ. ಡಿ. ಸತೀಶನ್ ಅವರಿಗೆ ದೇವಳದ ವತಿಯಿಂದ ಪೂರ್ಣಕುಂಭ ಕಲಶ ಸ್ವಾಗತ ನೀಡಲಾಗಿತ್ತು.

ಶುಕ್ರವಾರ ರಾತ್ರಿಯೇ ಆಗಮಿಸಿದ್ದ ಸತೀಶನ್ ಅವರು ಶನಿವಾರ ಬೆಳಗಿನ ಜಾವವೇ ಗಣಹೋಮದಲ್ಲಿ ಭಾಗಿಯಾದರು. ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿರುವುದು ವಿಶೇಷ. ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ Z-ಪ್ಲಸ್ ಭದ್ರತೆ ಕಲ್ಪಿಸಲಾಗಿತ್ತು, ಕ್ಷೇತ್ರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಯಾವುದೇ ರೀತಿಯಲ್ಲಿ ಭಕ್ತರಿಗೆ ಅಡ್ಡಿಪಡಿಸಲಾಗಿಲ್ಲ. ಪೂಜೆ ಬಳಿಕ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಮುಖ್ಯಮಂತ್ರಿ ಸತೀಶನ್ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಶ್ರೀ ಮೂಕಾಂಬಿಕಾ ದೇವಿಯ ಪರಮ ಭಕ್ತರಾಗಿರುವ ವಿ.ಡಿ. ಸತೀಶನ್, ದೇವಿಯ ಆಶೀರ್ವಾದ ಪಡೆದ ಬಳಿಕ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಪೊಲೀಸರು ವಿಶೇಷ ನಿಗಾ ವಹಿಸಿದ್ದರು.