ಬಂಟ್ವಾಳ, ಜು. 11 (DaijiworldNews/TA): ಕಳೆದ ವರ್ಷ ಇದೇ ಅವಧಿಯಲ್ಲಿ ಅಪಾಯದ ಮಟ್ಟದ ಸಮೀಪ ಹರಿದು ಆತಂಕ ಸೃಷ್ಟಿಸಿದ್ದ ನೇತ್ರಾವತಿ ನದಿ, ಈ ಬಾರಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ತುಂಬಿಕೊಂಡಿಲ್ಲ. ಮಳೆಗಾಲ ಆರಂಭವಾಗಿ ಹಲವು ದಿನಗಳಾದರೂ ನದಿಯಲ್ಲಿ ನೀರಿನ ಹರಿವು ಕಡಿಮೆಯೇ ಇರುವುದರಿಂದ ನೀರಿನ ಮಟ್ಟ ಗಮನಾರ್ಹವಾಗಿ ಏರಿಕೆಯಾಗಿಲ್ಲ.

ಬಿ.ಸಿ.ರೋಡ್ ಸಮೀಪದ ಕಂಚಿಕಾರಪೇಟೆಯಲ್ಲಿ ಕಂದಾಯ ಇಲಾಖೆ ಅಳವಡಿಸಿರುವ ಮೀಟರ್ ಗೇಜ್ನಲ್ಲಿ ದಾಖಲಾಗುತ್ತಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ ವರ್ಷ ಇದೇ ಅವಧಿಯಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟ ಸುಮಾರು5.9 ಮೀಟರ್ ತಲುಪಿತ್ತು. ಆದರೆ ಈ ಬಾರಿ ಇದುವರೆಗೆ 4 ಮೀಟರ್ ಗಡಿಯನ್ನೂ ದಾಟಿಲ್ಲ ಎಂದು ತಿಳಿದುಬಂದಿದೆ.
ನೇತ್ರಾವತಿ ನದಿಯ ನೀರಿನ ಮಟ್ಟವನ್ನು ಅಳೆಯಲು ಅಳವಡಿಸಿರುವ ಮೀಟರ್ ಗೇಜ್ನ ಅಳತೆ ಸ್ತಂಭಗಳ ಪೈಕಿ ಒಂದು ಸ್ತಂಭ ವಾಲಿರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಿ ನದಿಯ ನೀರಿನ ಮಟ್ಟ ಹೆಚ್ಚಾದರೆ, ನಿಖರ ಅಳತೆ ಪಡೆಯಲು ಇದು ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ತ್ವರಿತವಾಗಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಮಂಗಳೂರಿಗೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾಗಿರುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಸದ್ಯ ನೀರು ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಡ್ಯಾಂನ ಒಟ್ಟು 30 ಗೇಟ್ಗಳ ಪೈಕಿ 20 ಗೇಟ್ಗಳನ್ನು ಮುಚ್ಚಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಸಾಮಾನ್ಯವಾಗಿ ಈ ವೇಳೆಗೆ ನಿರಂತರ ಮಳೆಯ ಪರಿಣಾಮ ಡ್ಯಾಂನ ಗೇಟ್ಗಳನ್ನು ತೆರೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಈ ಬಾರಿ ಮಳೆಯ ಕೊರತೆಯಿಂದ ಅಂಥ ಪರಿಸ್ಥಿತಿ ಇನ್ನೂ ಎದುರಾಗಿಲ್ಲ.
ಬಂಟ್ವಾಳ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಿರುಗಾಳಿಯ ವೇಗ ಹೆಚ್ಚಾಗಿದ್ದರೂ, ಮಳೆಯ ಪ್ರಮಾಣ ನಿರೀಕ್ಷಿತ ಮಟ್ಟ ತಲುಪಿಲ್ಲ. ಅಲ್ಪಾವಧಿಯ ಮಳೆ ಮತ್ತು ಬಲವಾದ ಗಾಳಿಯಿಂದ ಮರಗಳು ಉರುಳುವುದು, ಮನೆಗಳಿಗೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗುವ ಘಟನೆಗಳು ವರದಿಯಾಗುತ್ತಿವೆ. ಆದರೆ ನಿರಂತರ ಮಳೆಯ ಕೊರತೆಯಿಂದ ನೇತ್ರಾವತಿ ನದಿಯಲ್ಲಿ ಗಮನಾರ್ಹ ನೀರಿನ ಹರಿವು ಕಂಡುಬಂದಿಲ್ಲ. ಸದ್ಯ ಸಣ್ಣ ಪ್ರಮಾಣದಲ್ಲಿ ಮಾತ್ರ ನೀರಿನ ಹರಿವು ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ನದಿಯ ನೀರಿನ ಮಟ್ಟದಲ್ಲಿ ಏರಿಕೆ ಕಾಣುವ ನಿರೀಕ್ಷೆಯಿದೆ.