ಮಂಗಳೂರು, ಜು. 10 (DaijiworldNews/AK): ನಗರ ಕಮೀಷನರೇಟ್ ನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಕ್ರಮವಾಗಿ ವಾಸ್ತವ್ಯವಿದ್ದ ಬಾಂಗ್ಲಾದೇಶದ 8 ಮಂದಿ ಪ್ರಜೆಗಳನ್ನು ಪತ್ತೆ ಹಚ್ಚಲಾಗಿದೆ.

ಒಟ್ಟು 54 ಜನ ಕಟ್ಟಡ ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಿದಾಗ ಎಂಟು ಜನ ಬಾಂಗ್ಲಾ ಪ್ರಜೆಗಳು ಪತ್ತೆಯಾಗಿದ್ದಾರೆ. ಅಜರುಲ್ ಇಸ್ಲಾಂ, ಮುಹಮ್ಮದ್ ರಕೀಬ್, ಜಾಹಿದ್ ಹುಸೇನ್, ಮಹಮ್ಮದ್ ಬಿಲಾಲ್ ಹುಸೇನ್, ಸೋಯೆಬ್ ಉಲ್ಲಾ, ಮಹಮ್ಮದ್ ಸಂಟುಲ್, ಮೌಕರ್ ಆಲಿ, ಅಜರುಲ್ ಇಸ್ಲಾಂ ಪತ್ತೆಯಾಗಿರುವ ಬಾಂಗ್ಲಾ ಪ್ರಜೆಗಳು.
ಬಾಂಗ್ಲಾದೇಶದ ಪ್ರಜೆಗಳು ಸುಮಾರು ಮೂರು ತಿಂಗಳ ಹಿಂದೆ ಅಕ್ರಮವಾಗಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಭಾರತಕ್ಕೆ ಬಂದು ನಂತರ ಮುರ್ಷಿದಾಬಾದ್ನ ಪಶ್ಚಿಮ ಬಂಗಾಳದ ವಿಳಾಸವಿರುವ ಆಧಾರ್ ಕಾರ್ಡ್ಗಳಿಗೆ ಬಾಂಗ್ಲಾದೇಶ ನಿವಾಸಿಗಳ ಭಾವಚಿತ್ರವನ್ನು ಅಂಟಿಸಿ ಕಲರ್ ಜೆರಾಕ್ಸ್ನ್ನು ಮಾಡಿ ಎರಡು ತಿಂಗಳಿನಿಂದ ಮುಕ್ಕ ಬಂದು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು.
ಬಾಂಗ್ಲಾ ಪ್ರಜೆಗಳನ್ನು ಠಾಣೆಗೆ ಕರೆತಂದು ಕೂಲಂಕಷವಾಗಿ ಪರಿಶೀಲನೆಯನ್ನು ಮಾಡಿ ಅವರ ಗುರುತಿನ ಚೀಟಿ ನ್ಯಾಷನಲ್ ಐಡಿ ಕಾರ್ಡ್, ಜನನ ಪ್ರಮಾಣ ಪತ್ರ ಹಾಗೂ ಅವರ ಕುಟುಂಬದವರ ದಾಖಲಾತಿಗಳನ್ನು ಪರಿಶೀಲಿಸಿದಾಗ ಇವರು ಬಾಂಗ್ಲಾದೇಶ ನಿವಾಸಿಗಳೆಂದು ದೃಢಪಟ್ಟಿದೆ.
ಇವರು ಇಲ್ಲಿಗೆ ಕೂಲಿ ಕೆಲಸಕ್ಕಾಗಿ ಬಂದಿದ್ದು, ಬಾಂಗ್ಲಾದೇಶ ನಿವಾಸಿಗಳು ಯಾವುದೇ ರಹದಾರಿ ಪತ್ರ, ವೀಸಾ ಅನ್ನು ಪಡೆಯದೆ ಅಕ್ರಮವಾಗಿ ಭಾರತದ ಗಡಿಯನ್ನು ದಾಟಿ ನುಸುಳಿ ಬಂದಿರುವುದಾಗಿದೆ. ಅಕ್ರಮವಾಗಿ ನುಸುಳಿ ಭಾರತ ದೇಶವನ್ನು ಪ್ರವೇಶಿಸಿದ ಈ ಬಾಂಗ್ಲಾದೇಶದ ಪ್ರಜೆಗಳನ್ನು ಮುಂದಿನ ಕ್ರಮಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್ಆರ್ಆರ್ಒ) ವರದಿ ಕಳುಹಿಸಲಾಗುತ್ತಿದೆ. ನಂತರ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆಯಲು ಎಫ್ಆರ್ಆರ್ಒ ಆದೇಶ ಹೊರಡಿಸಲಿದೆ ಹಾಗೂ ಸ್ವದೇಶಕ್ಕೆ ಗಡಿಪಾರು ಮಾಡಲು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಅಕ್ರಮವಾಗಿ ನುಸುಳಿ ಭಾರತ ದೇಶವನ್ನು ಪ್ರವೇಶಿಸಿದ ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆ ಮಾಡುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರವರಾದ ಶ್ರೀ ಶ್ರೀಕಾಂತ್ ರವರ ನೇತ್ರತ್ವದಲ್ಲಿ, ಸುರತ್ಕಲ್ ಪೊಲೀಸ್ ನಿರೀಕ್ಷಕರವರಾದ ಪ್ರಮೋದ್ ಕುಮಾರ್, ಪಿಎಸ್ಐ ರಘು ನಾಯಕ, ಠಾಣಾ ಸಿಬ್ಬಂದಿಗಳಾದ ಎ.ಎಸ್.ಐ ರಾಜೇಶ್ ಆಳ್ವ, ತಿರುಪತಿ ಅಳ್ಳೊಳ್ಳಿ, ಉಮೇಶ್, ರಾಜೇಂದ್ರ ಪ್ರಸಾದ್, ಕಾರ್ತಿಕ್, ವಿನೋದ್ ಕುಮಾರ್, ಸತೀಶ್ ಸತ್ತಿಗೇರಿ, ಸಂತೋಷ್ ಮತ್ತು ಓಂಪ್ರಕಾಶ್ ಬಿಂಗಿರವರು ಭಾಗವಹಿಸಿದರು.